ಸಿದ್ದಾಪುರ, ಸೆ ೧೬: ಹುಲಿ ಕಾರ್ಯಾಚರಣೆ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಹುಲಿಯು ಇನ್ನೂ ಪತ್ತೆ ಆಗಲಿಲ್ಲ. ಜಾನುವಾರುಗಳ ಮೇಲೆ ಧಾಳಿ ನಡೆಸಿ ಸಾಯಿಸುತ್ತಿದ್ದ ಹುಲಿಯನ್ನು ಗುರುವಾರದಂದು ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖಾಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ಪ್ರಯೋಗಿಸಿದಾಗ ಹುಲಿಯು ತೋಟದೊಳಗಿನಿಂದ ಕಾಡಿನತ್ತ ಓಡಿ ಕಣ್ಮರೆಯಾಯಿತು. ಆದರೂ ಕಾರ್ಯಾಚರಣೆ ತಂಡವು ಸಂಜೆಯವರೆಗೆ ನಾಲ್ಕು ಸಾಕಾನೆಗಳ ನೆರವಿನಿಂದ ಹುಡುಕಾಡಿತು. ಹುಲಿಯ ಸುಳಿವು ಲಭಿಸಲಿಲ್ಲ. ಶುಕ್ರವಾರದಂದು ಮತ್ತೆ ಹುಲಿಯನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ತಂಡ ಬಾಡಗ-ಬಾಣಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಸಾಕಾನೆಗಳೊಂದಿಗೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಆದರೆ ಹುಲಿಯು ಪತ್ತೆ ಆಗಲಿಲ್ಲ. ಹುಲಿಯು ಕಳೆದೆರಡು ದಿನಗಳ ಹಿಂದೆ ಘಟ್ಟದಳದ ಸರ್ಕಾರಿ ತಮಿಳು ಶಾಲೆಯ ಸಮೀಪ ಹಸುವನ್ನು ಕೊಂದಿದ್ದ ಸ್ಥಳದಲ್ಲೇ ಹಸುವಿನ ಮೃತದೇಹವನ್ನು ಇರಿಸಲಾಗಿದೆ. ಹುಲಿಯು ಆ ಜಾಗದಲ್ಲಿ ಮೊನ್ನೆ ಬಂದಿದ್ದು ಮತ್ತೆ ಬರಬಹುದೆಂಬ ನಿರೀಕ್ಷೆಯಿಂದ ಆ ಜಾಗದ ಸುತ್ತಲೂ ಹೆಚ್ಚಿನ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಹಾಗೂ ಬೋನ್‌ಗಳನ್ನು ಇರಿಸಲಾಗಿದೆ. ಹುಲಿಯು ಕಾರ್ಯಾಚರಣೆ ಸಂದರ್ಭದಲ್ಲಿ ಕೂದಲೆಳೆಯ ಅಂತರದಿAದ ಪಾರಾಗಿದ್ದು, ಸಮಸ್ಯೆ ಎದುರಾಗಿದೆ. ಹುಲಿಯ ಹಾವಳಿಯಿಂದಾಗಿ ಮಾಲ್ದಾರೆ ಹಾಗೂ ಬಾಡಗ ಬಾಣಂಗಾಲ ಗ್ರಾಮಸ್ಥರಿಗೆ, ಕಾರ್ಮಿಕರಿಗೆ, ಶಾಲಾ ಮಕ್ಕಳಿಗೆ ಭಯದ ವಾತಾವರಣ ಮೂಡಿದೆ. ಹುಲಿ ಸೆರೆ ಕಾರ್ಯಾಚರಣೆಯನ್ನು ಮುಂದುವರೆಸಲು ಅರಣ್ಯ ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ.

- ವಾಸು.