ಮಡಿಕೇರಿ, ಸೆ. ೧೬: ಮಹಾರಾಷ್ಟç ರಾಜ್ಯದ ಪುಣೆಯಲ್ಲಿ ತಾ. ೨೨ ರಿಂದ ೩ ದಿನಗಳ ಕಾಲ ನಡೆಯಲಿರುವ ರಾಷ್ಟçಮಟ್ಟದ ಕಾರ್ಯಾಗಾರಕ್ಕೆ ತಾಲೂಕಿನ ಭಾಗಮಂಡಲ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ ಎಂದು ಜಿ.ಪಂ .ಸಿಇಒ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.

ಭಾರತ ಸರ್ಕಾರ, ಕೇಂದ್ರ ಜಲಶಕ್ತಿ ಮಂತ್ರಾಲಯ, ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇವರ ಸಹಯೋಗದಲ್ಲಿ ಸ್ಥಳೀಯವಾಗಿ ಸುಸ್ಥಿರ ಅಭಿವೃದ್ಧಿಯ ಗುರಿಗಳು ವಿಚಾರವಾಗಿ ೩ ದಿನಗಳ ಕಾರ್ಯಾಗಾರ ನಡೆಯಲಿದೆ.

ದೇಶದಲ್ಲಿಯೇ ಗುಜರಾತ್, ಕರ್ನಾಟಕ, ಮಹರಾಷ್ಟç, ತೆಲಂಗಾಣ ಮತ್ತು ಉತ್ತರಪ್ರದೇಶ ರಾಜ್ಯದ ೫ ಗ್ರಾಮ ಪಂಚಾಯಿತಿಗಳು ಮಾತ್ರ ಈ ಕಾರ್ಯಾಗಾರದಲ್ಲಿ ಭಾಗಿಯಾಗುತ್ತಿದ್ದು, ಈ ಪೈಕಿ ಕರ್ನಾಟಕದಿಂದ ಭಾಗಮಂಡಲ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ಭಾಗಮಂಡಲ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕ ಕುರಿತಂತೆ ಮಾಹಿತಿ ಮತ್ತು ಕಾರ್ಯವಿಧಾನವನ್ನು ಪ್ರಸ್ತುತಿ ಪಡಿಸಲಾಗುತ್ತದೆ.