ಗುಡ್ಡೆಹೊಸೂರು, ಸೆ. ೧೫: ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ಅತ್ತೂರು, ಬಸವನಹಳ್ಳಿ, ಬೆಟ್ಟಗೇರಿ, ಬಾಳುಗೋಡು, ರಸಲ್‌ಪುರ ಗ್ರಾಮದಲ್ಲಿ ಒಂಟಿ ಸಲಗ ದಾಂಧಲೆ ಹೆಚ್ಚಾಗಿದ್ದು, ಪರಿಣಾಮ ಜನರು ಹೈರಾಣಾಗಿದ್ದಾರೆ. ಪ್ರತಿನಿತ್ಯ ರಾತ್ರಿಯಾಗುತ್ತಿದ್ದಂತೆ, ದಿನಕ್ಕೊಂದು ಗ್ರಾಮಕ್ಕೆ ದಾಂಗುಡಿ ಇಡುವ ಕಾಡಾನೆಗಳು ರೈತರು ಬೆಳೆದ ಜೋಳ, ಬಾಳೆ, ಗೆಣಸು, ತೆಂಗು ಮುಂತಾದ ಬೆಳೆಗಳನ್ನು ನಾಶಪಡಿಸುತ್ತಿವೆ.
ಬಸವನಹಳ್ಳಿ ಗ್ರಾಮದ ಕೃಷ್ಣಪ್ಪ, ಗಣೇಶ್, ನಾಗರಾಜ್ ಮೋಹನ್ ಅವರ ಮನೆಯ ಗೇಟ್‌ನ್ನು ನಾಶಪಡಿಸಿದೆ. ಅತ್ತೂರು ಗ್ರಾಮದ ಭರತ್, ದಾದಪ್ಪ, ಸಿದ್ದಾರ್ಥ ಮುಂತಾದವರು ಬೆಳೆದ ಮುಸುಕಿನ ಜೋಳವನ್ನು ತಿಂದು ನಾಶಪಡಿಸಿದ ಘಟನೆ ವರದಿಯಾಗಿದೆ.
ಅದೇ ರೀತಿ ಬೆಟ್ಟಗೇರಿ ಗ್ರಾಮದ ಹಲವು ರೈತರ ಜಮೀನುಗಳಿಗೆ ದಾಳಿ ಮಾಡಿ ಬೆಳೆ ನಷ್ಟಪಡಿಸುತ್ತಿವೆ. ದೊಡ್ಡಬೇಟ್ಟಗೇರಿ ವ್ಯಾಪ್ತಿಯಲ್ಲಿ ಗದ್ದೆ ನಾಟಿ ಮಾಡಿದ ದಿನವೆ ಸಲಗ ಗದ್ದೆಗೆ ದಾಳಿ ಮಾಡಿದೆ. ಹತ್ತು ಸಾವಿರ ಹಣದಷ್ಟು ಬೇಳೆ ನಾಶವಾದರೆ ಇಲಾಖೆಯಿಂದ ಎರಡು ಸಾವಿರ ಹಣ ಪರಿಹಾರ ಸಿಗುತ್ತೆ, ಅದಕ್ಕೂ ವರ್ಷಗಟ್ಟಲೆ ಕಾಯಬೇಕು, ಕಾಡಾನೆಗಳು ನಾಡಿಗೆ ಬರದಂತೆ ಸೂಕ್ತ ವ್ಯವಸ್ಥೆ ಮಾಡಲಿ ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.
ಬೊಳ್ಳುರು ಗ್ರಾಮದ ಸುಣ್ಣದಕೆರೆ ಎಂಬಲ್ಲಿ ಅಲ್ಲಿನ ರೈತರಾದ ರತ್ನಮ್ಮ ಎಂಬುವರ ಕಾಫಿ, ಬಾಳೆ ತೋಟವನ್ನು ಕಳೆದ ಎರಡು ದಿನಗಳಿಂದ ಆನೆ ದಾಳಿ ಮಾಡಿ ನಾಶಪಡಿಸುತ್ತಿವೆ ಎಂದು ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದಾರೆ.
-ಗಣೇಶ್ ಕುಡೆಕಲ್