ಮಡಿಕೇರಿ, ಸೆ. ೧೫: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಅತ್ಯುತ್ತಮ ಶಿಕ್ಷಕರಿಗಾಗಿನ ರೋಟರಿಯ ಪ್ರತಿಷ್ಠಿತ ಪ್ರಶಸ್ತಿಯಾದ ನೇಷನ್ ಬಿಲ್ಡರ್ ಅವಾರ್ಡ್ನ್ನು ಮೂವರು ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಹೊದವಾಡ ಸರ್ಕಾರಿ ಶಾಲಾ ಶಿಕ್ಷಕಿ ಅಪರ್ಣ ಉಪಾಧ್ಯಾಯ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕಿ ಡಾ. ಗಾಯತ್ರಿ ದೇವಿ, ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎವರೆಸ್ಟ್ ರೊಡ್ರಿಗಸ್ ಅವರಿಗೆ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ನಿರ್ದೇಶಕರಾದ ಅನಿತಾ ಪೂವಯ್ಯ, ಮೋಹನ್ ಪ್ರಭು, ಕೆ.ಡಿ. ದಯಾನಂದ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಅಪರ್ಣ ಉಪಾಧ್ಯಾಯ, ಕೊಡಗಿನ ಗ್ರಾಮೀಣ ಶಾಲೆಯಾಗಿರುವ ಹೊದವಾಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವುದು ತೃಪ್ತಿ ತಂದಿದೆ. ಶಾಲೆಗೆ ಶೇ. ೧೦೦ರ ಫಲಿತಾಂಶ ತರುವಲ್ಲಿ ಶಿಕ್ಷಕ ವೃಂದದ ಪ್ರತೀಯೋರ್ವರ ಶ್ರಮವಿದೆ. ಪೋಷಕರೂ ಸಹಕಾರ ನೀಡುತ್ತಾ ಬಂದಿದ್ದಾರೆ. ಎಸ್.ಎಸ್.ಎಲ್.ಸಿ. ಯಲ್ಲಿ ತೀರಾ ಕಳಪೆಯಾಗಿದ್ದ ಫಲಿತಾಂಶವನ್ನು ಇತ್ತೀಚಿನ ವರ್ಷಗಳಲ್ಲಿ ಶೇ. ೧೦೦ಕ್ಕೆ ಹೆಚ್ಚಿಸಿದ್ದು ಆತ್ಮತೃಪ್ತಿ ತಂದಿದೆ ಎಂದರು. ಪೋಷಕರ ಸಹಕಾರವಿದ್ದರೆ ಮಕ್ಕಳಲ್ಲಿನ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶಿಕ್ಷಕರ ಕಾರ್ಯ ಸಲೀಸಾಗುತ್ತದೆ ಎಂದು ಅವರು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣಕ್ಕೆ ಸದಾ ಅಗ್ರ ಸ್ಥಾನ ನೀಡುತ್ತಿದ್ದು, ಕೋವಿಡ್ ಲಾಕ್ ಡೌನ್ ಸಂದರ್ಭವೂ ರೋಟರಿ ಭಾರತ ಶಿಕ್ಷಣ ಕ್ಷೇತ್ರಕ್ಕೆ ಯುನಿಸೆಫ್ ಸಹಯೋಗದಲ್ಲಿ ೨ ಸಾವಿರ ಗಂಟೆಗಳ ಪಠ್ಯವಿರುವ ಡಿವಿಡಿಗಳನ್ನು ಒದಗಿಸಿತ್ತು ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯ ರಾಗಿ ಸಾಮಾಜಿಕ ಹೊಣೆಗಾರಿಕೆ ಯುಳ್ಳ ಶಿಕ್ಷಕ ವರ್ಗವನ್ನು ಗುರುತಿಸಿ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ರೋಟರಿಯಿಂದ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಸಾದ್ ಹೇಳಿದರು.
ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ನಲ್ಲಿರುವ ಶಿಕ್ಷಕ ವರ್ಗದವರನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಪ್ರೊ. ಶ್ರೀಧರ ಹೆಗಡೆ, ಕೆ.ಎಂ. ಪೂಣಚ್ಚ, ಸಂತ ಜೋಸೇಫರ ಶಾಲಾ ಶಿಕ್ಷಕಿಯರಾದ ನೀತಾ ಹೆಗಡೆ, ಸಹನಾ ಗೋಪಾಲಕೃಷ್ಣ, ಸರ್ಕಾರಿ ಜೂನಿಯರ್ ಕಾಲೇಜು ಉಪನ್ಯಾಸಕಿ ಸುಪ್ರಿಯಾ ರವಿಶಂಕರ್, ಸೋನಾ ನಾಣಯ್ಯ, ಗೋಣಿಕೊಪ್ಪ ಕಾಪ್ಸ್ ಶಾಲೆಯ ಉಪನ್ಯಾಸಕಿ ರೇಷ್ಮಾ ಪೂಣಚ್ಚ, ವೀರಾಜಪೇಟೆ ಸಂತ ಅನ್ಮಮ್ಮ ಶಾಲಾ ಶಿಕ್ಷಕಿ ಮೋಹನಾಕ್ಷಿ, ಶಿಕ್ಷಣ ತಜ್ಞೆ ರಶ್ಮಿದೀಪಾ, ಶಿಕ್ಷಕಿ ಶುಭವಿಶ್ವನಾಥ್ ಅವರಿಗೆ ಗೌರವ ಸಂದಿತು.
ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ, ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಜಿ.ಆರ್. ರವಿಶಂಕರ್, ಅಂಬೆಕಲ್ ವಿನೋದ್ ಕುಶಾಲಪ್ಪ ನಿರ್ವಹಿಸಿದರು. ಕಾರ್ಯದರ್ಶಿ ಪ್ರಮೋದ್‌ಕುಮಾರ್ ರೈ ವಂದಿಸಿದರು.