ಮಡಿಕೇರಿ, ಸೆ. ೧೬: ಲಯನ್ಸ್ ಸಂಸ್ಥೆಯ ೧೦೧ನೇ ವರ್ಷ ಆಚರಣೆಗೆ ಸಮಾಜ ಸೇವೆಯಂತಹ ಉತ್ತಮ ಕಾರ್ಯಕ್ರಮಗಳನ್ನು ಸದಸ್ಯರು ಹೆಚ್ಚಾಗಿ ಹಮ್ಮಿಕೊಳ್ಳುವಂತಾಗಬೇಕು ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಲಯನ್ಸ್ ಪ್ರಾಂತಿಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಅವರು, ಕಡಿಮೆ ಖರ್ಚಿನಲ್ಲಿ ಜನರಿಗೆ ಹೆಚ್ಚು ಅನುಕೂಲವಾಗುವಂತಹ ಸಮಾಜಸೇವೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹೇಳಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ನೂರೇರ ಶೀಲಾ ಮಾಯಮ್ಮ ಅವರು ಮಾತನಾಡಿ ಶಿಕ್ಷಕರ ಹುದ್ದೆ ಬಹಳ ಕಷ್ಟವಾಗಿದ್ದು ಹಿಂದೆ ದೂರದ ಶಾಲೆಗಳಿಗೆ ಬಸ್ಸುಗಳಿಲ್ಲದೆ ನಡೆದು ಹೋಗಬೇಕಾಗಿತ್ತು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಡಮಕ್ಕಳು ಒಂದು ದಿನ ಬಂದರೆ ಮರುದಿನ ರಜೆ ಮಾಡುತ್ತಿದ್ದರು. ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವ ಪರಿಸ್ಥಿತಿ ಇತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಅದೆಲ್ಲ ಬದಲಾಗಿ ಶಿಕ್ಷಣ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧÀ್ಯಕ್ಷ ಪಿ.ಟಿ.ನರೇಂದ್ರ ಅವರು ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಲಯನ್ ವಲಯ ಅಧ್ಯಕ್ಷ ಎಂ.ಎA.ವಿನಯ್, ಸಲಹೆಗಾರ ಕೆ.ಆರ್.ಮೋಹನ್ ರೈ, ಕಾರ್ಯದರ್ಶಿ ಎ.ಎ.ಅಜೀತ್, ಖಜಾಂಚಿ ಬಿ.ಪಿ.ಗಣಪತಿ ಮತ್ತಿತರರು ಉಪಸ್ಥಿತರಿದ್ದರು. ಪಿ.ಟಿ.ನರೇಂದ್ರ ಸ್ವಾಗತಿಸಿದರೆ, ಎ.ಎ.ಅಜೀತ್ ವಂದಿಸಿದರು. ಕಾರ್ಯಕ್ರಮಕ್ಕೆ ಮಡಿಕೇರಿ, ನಾಪೋಕ್ಲು, ಮೂರ್ನಾಡು, ಸೋಮವಾರಪೇಟೆ, ಕುಶಾಲನಗರ, ಪಿರಿಯಾಪಟ್ಟಣ, ಗೋಣಿಕೊಪ್ಪ, ಪಾಲಿಬೆಟ್ಟ ಇತರೆಡೆಗಳಿಂದ ಸದಸ್ಯರು ಭಾಗವಹಿಸಿದ್ದರು.