ಸೋಮವಾರಪೇಟೆ,ಸೆ. ೧೬: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಸಂಪರ್ಕಿಸುವ ಮಸಗೋಡು-ಕಣಿವೆ ಮುಖ್ಯರಸ್ತೆ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಮುಂದಿನ ೧೫ ದಿನಗಳ ಒಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸಲಾಗುವುದು. ಇದರೊಂದಿಗೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮಸಗೋಡು -ಕಣಿವೆ ಮುಖ್ಯರಸ್ತೆಯು ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದು, ದುರಸ್ತಿ ಕಾರ್ಯ ನಡೆಯದೇ ದಶಕಗಳೇ ಕಳೆದಿವೆ. ಈ ಬಗ್ಗೆ ಕ್ಷೇತ್ರದ ಶಾಸಕರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ. ಕೃಷಿಕರು ಮತ್ತು ಕೂಲಿ ಕಾರ್ಮಿಕರೇ ಅಧಿಕವಿರುವ ಈ ಭಾಗದಲ್ಲಿ ರಸ್ತೆಯ ಬೇಡಿಕೆ ಇಂದಿಗೂ ಈಡೇರಿಲ್ಲ ಎಂದು ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎನ್. ಅನಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಾಲೂಕು ಕಚೇರಿಗೆ ಮನವಿ ಸಲ್ಲಿಸಿ ಪತ್ರಿಕಾಗೋಷ್ಠಿಯಲ್ಲಿ ರಸ್ತೆ ದುರವಸ್ಥೆಯ ವಿವರ ನೀಡಿದ ಅವರು, ಮಸಗೋಡು ಗ್ರಾಮದಿಂದ ಕಣಿವೆ ಸಂಪರ್ಕಿಸುವ ಸುಮಾರು ೧೮ ಕಿ.ಮೀ. ರಸ್ತೆ ಇನ್ನಿಲ್ಲದಂತೆ ಹಾಳಾಗಿದೆ. ಕಳೆದ ೧೦ ವರ್ಷಗಳಿಂದ ದುರಸ್ತಿ ಮಾಡಿಲ್ಲ. ರಸ್ತೆಯ ತುಂಬೆಲ್ಲಾ ಹೊಂಡಾ ಗುಂಡಿಗಳು ನಿರ್ಮಾಣವಾಗಿದ್ದು, ನಡೆದಾಡಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಹಿಂದೆ ೫ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಇದೀಗ ರಸ್ತೆಯ ಅವ್ಯವಸ್ಥೆಯಿಂದಾಗಿ ಒಂದೇ ಒಂದು ಬಸ್ ಸಹ ಆಗಮಿಸುತ್ತಿಲ್ಲ. ಆಟೋಗಳೂ ಸಹ ಗ್ರಾಮಕ್ಕೆ ಬರುತ್ತಿಲ್ಲ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕನಿಷ್ಟ ೩ ರಿಂದ ೭ ಕಿ.ಮೀ. ಪ್ರತಿದಿನ ನಡೆದುಕೊಂಡು ಹೋಗಬೇಕಾಗಿದೆ. ನಾವು ಕೊಡಗಿನಲ್ಲಿದ್ದೇವಾ? ಎಂಬ ಅನುಮಾನ ಕಾಡತೊಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಆಟೋಗಳು ೫೦ ರೂಪಾಯಿ ಬಾಡಿಗೆ ತೆಗೆದುಕೊಳ್ಳುತ್ತಿದ್ದವು. ಇದೀಗ ಬಲವಂತ ಮಾಡಿ ಕರೆದರೂ ೨೦೦ ರಿಂದ ೩೦೦ ರೂಪಾಯಿ ಕೇಳುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು, ೫ ಗಿರಿಜನ ಹಾಡಿಗಳು, ಸುಮಾರು ೫ ಸಾವಿರ ಜನಸಂಖ್ಯೆಯಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನಂಪ್ರತಿ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೂ ಸಂಬAಧಿಸಿದ ಇಲಾಖೆ ಹಾಗೂ ಶಾಸಕರು ಈ ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ಈವರೆಗೆ ಕ್ರಮವಹಿಸಿಲ್ಲ ಎಂದು ಆರೋಪಿಸಿದರು.

ಮಸಗೋಡು, ನೇಗಳ್ಳೆ ಅರೆಯೂರು, ಯಲಕನೂರು ಹೊಸಳ್ಳಿ ಸೀಗೇಹೊಸೂರು ಭುವನಗಿರಿ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ಆ್ಯಂಬ್ಯುಲೆನ್ಸ್ಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದರಿಂದ ಹೋರಾಟದ ಹಾದಿ ಹಿಡಿಯುವಂತಾಗಿದೆ. ಮೊದಲ ಹಂತವಾಗಿ ಸಂಬAಧಪಟ್ಟವರಿಗೆ ಮತ್ತೊಮ್ಮೆ ಗಡುವು ನೀಡಲಾಗುವುದು. ೧೫ ದಿನಗಳಲ್ಲಿ ಸ್ಪಂದನ ಲಭಿಸದಿದ್ದರೆ ಹೋರಾಟ ಸಂಘಟಿಸಲಾಗುವುದು ಎಂದು ಸಮಿತಿಯ ಉಪಾಧ್ಯಕ್ಷ ಹೆಚ್.ಕೆ. ಲೋಕೇಶ್ ಎಚ್ಚರಿಸಿದರು.

ಈ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ವಾರ್ಷಿಕ ೧೦೦ ಕೋಟಿಗೂ ಅಧಿಕ ರಾಜಧನವನ್ನು ಸರ್ಕಾರಕ್ಕೆ ನೀಡಲಾಗುತ್ತಿದೆ. ಈ ಹಣದಲ್ಲಿ ಒಂದಿಷ್ಟು ಪಾಲನ್ನಾದರೂ ರಸ್ತೆಗೆ ವಿನಿಯೋಗಿಸಬೇಕು. ಕಾಡಾನೆಗಳ ಉಪಟಳವೂ ಅಧಿಕವಾಗಿದೆ. ಹೊಂಡಾಗುAಡಿಗಳ ರಸ್ತೆಯಿಂದಾಗಿ ವಾಹನಗಳನ್ನು ರಸ್ತೆಗಿಳಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಇಂತಹ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕು. ಆಗ ಸಮಸ್ಯೆಯ ದರ್ಶನವಾಗುತ್ತದೆ ಎಂದು ಎಂದರು.

ರಸ್ತೆ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಡಿಕೇರಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಈಡೇರದಿದ್ದರೆ ಈ ಭಾಗದ ಎಲ್ಲಾ ಬೂತ್‌ಗಳಲ್ಲೂ ಚುನಾವಣೆಗಳನ್ನು ಬಹಿಷ್ಕಾರ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಖಜಾಂಚಿ ಟಿ.ಕೆ. ಲೋಕಾನಂದ, ಕೂಡಿಗೆ ಗ್ರಾ.ಪಂ. ಸಸ್ಯ ಅರುಣ್‌ರಾವ್, ನೇರುಗಳಲೆ ಗ್ರಾ.ಪಂ. ಮಾಜೀ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ ಉಪಸ್ಥಿತರಿದ್ದರು.