ಮಡಿಕೇರಿ, ಸೆ. ೧೬: ನಾಡಹಬ್ಬ ದಸರಾ ಹಾಗೂ ಕಾವೇರಿ ತೀರ್ಥೋದ್ಭವ ಆಚರಣೆಗೆ ಸರ್ವ ಸಿದ್ಧತೆ ಕೈಗೊಳ್ಳಬೇಕು. ವ್ಯವಸ್ಥಿತವಾಗಿ ನಡೆಯುವಂತೆ ಮುತುವರ್ಜಿ ವಹಿಸಿ. ಯಾವುದೇ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಲು ಅಧಿಕಾರಿಗಳು ಹಾಗೂ ದಸರಾ ಸಮಿತಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ದಸರಾ ಹಾಗೂ ತೀರ್ಥೋದ್ಭವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಅತ್ಯಂತ ವೈಭವಯುತವಾಗಿ ನಡೆಯಲಿದ್ದು, ವಿಜಯದಶಮಿಯಂದು ಜಿಲ್ಲೆಯಲ್ಲಿ ಜನ ಹಾಗೂ ವಾಹನ ದಟ್ಟಣೆ ಸಹಜವಾಗಿ ಹೆಚ್ಚಾಗಲಿದೆ. ಈ ಹಿನ್ನೆಲೆ ಸೂಕ್ತ ಪೊಲೀಸ್ ಭದ್ರತೆಯ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಿದರು.

ಅನುದಾನದ ಭರವಸೆ

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಹಾಗೂ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚಿನ ಖರ್ಚು ಕರಡು ಬಜೆಟ್‌ನಲ್ಲಿ ಬಂದಿದ್ದು, ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ಮಡಿಕೇರಿಗೆ ರೂ. ೩೬ ಲಕ್ಷ ಹಾಗೂ ಗೋಣಿಕೊಪ್ಪಕ್ಕೆ ರೂ. ೧೦ ಲಕ್ಷದ ಅವಶ್ಯಕತೆ ಇದೆ ಎಂದು ಕೋರಿದ ಸಂದರ್ಭ ಇದಕ್ಕೆ ಉತ್ತರಿಸಿದ ಸಚಿವರು, ಈ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಅನುದಾನ ಬಿಡುಗಡೆಗೆ ಗಮನಸೆಳೆಯಲಾಗುವುದು. ಸರಕಾರ ಸಕಾರತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.

ಧ್ವನಿವರ್ಧಕ ಬಳಕೆಯ ಬಗ್ಗೆ ತೀರ್ಮಾನ

ಧ್ವನಿವರ್ಧಕ ಬಳಕೆಯ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳ ಲಾಗುವುದು. ಈ ಸಂಬAಧ ಕಾನೂನು ಸಚಿವರೊಂದಿಗೆ ಮಾತುಕತೆ ನಡೆಸಿ ವಿಶೇಷ ಅನುಮತಿ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂಬAಧ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಪ್ರತಿವರ್ಷ ಯಾವ ರೀತಿ ದಸರಾ ನಡೆಯುತ್ತದೆ ಅದೇ ರೀತಿ ಈ ಬಾರಿಯೂ ನಡೆಯಲಿದೆ. ಧ್ವನಿವರ್ಧಕ ಬಳಕೆಯ ಬಗ್ಗೆ ಸೃಷ್ಟಿಯಾಗಿರುವ ಗೊಂದಲವನ್ನು ಪರಿಹರಿಸಲಾಗುವುದು ಎಂದರು.

ದಸರಾ ಸಮಿತಿ ಪ್ರಮುಖರು, ದಸರಾ ಆರಂಭದ ಸಮಯದಲ್ಲಿ ಶಾಲಾ ಪರೀಕ್ಷೆ ನಡೆಯಲಿದೆ. ಇದರಿಂದ ವಿದ್ಯಾರ್ಥಿಗಳು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವದಕ್ಕೆ ಸಮಸ್ಯೆಯಾಗಲಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪರೀಕ್ಷೆಗಳನ್ನು

(ಮೊದಲ ಪುಟದಿಂದ) ದಸರಾ ಬಳಿಕ ನಡೆಸಲು ಶಿಕ್ಷಣ ಇಲಾಖೆಗೆ ಸೂಚಿಸಿದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಕಳೆದ ಬಾರಿ ಸರಳ ದಸರಾ ಆಚರಿಸಿದರು. ೫೦ ರಿಂದ ೬೦ ಸಾವಿರ ಜನರು ನಗರ ಪ್ರವೇಶಿಸಿದ್ದರು. ಈ ಬಾರಿ ಸುಮಾರು ೩ ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆ ಹೆಚ್ಚಿನ ಪೊಲೀಸ್ ಭದ್ರತೆ ಬೇಕಾಗಿದೆ. ಕರಗ ಪ್ರದಕ್ಷಿಣೆ ಸಂದರ್ಭ ಆಯಾ ರಸ್ತೆಯಲ್ಲಿ ಸಂಚಾರ ನಿರ್ಬಂಧ ವಿಧಿಸಬೇಕು. ವಿಜಯದಶಮಿಯಂದು ಸಂಜೆ ೪ ಗಂಟೆಯ ಬಳಿಕ ನಗರಕ್ಕೆ ಪ್ರವೇಶಿಸುವ ಎಲ್ಲಾ ರಸ್ತೆಗಳ ಸಂಚಾರಕ್ಕೆ ನಿಷೇಧ ಹೇರುವಂತೆ ಕೋರಿದರು.

ದಸರಾ ಕಾರ್ಯಕ್ರಮದ ಎಲ್ಲಾ ಆಚರಣೆ ಸಂದರ್ಭ ಒಂದು ಆಂಬ್ಯುಲೆನ್ಸ್, ವೈದ್ಯೆ ಹಾಗೂ ನರ್ಸ್ ಅನ್ನು ನಿಯೋಜನೆ ಮಾಡಬೇಕು. ಹಾಗೆಯೇ ವಿದ್ಯುತ್ ಇಲಾಖೆ ದಸರಾ ಸಮಿತಿಯೊಂದಿಗೆ ಸಹಕರಿಸಬೇಕು. ದಶಮಂಟಪ ಶೋಭಾಯಾತ್ರೆ ಸಂದರ್ಭ ಅಡ್ಡವಿರುವ ಲೈನ್ ತೆರವುಗೊಳಿಸಬೇಕು ಎಂದು ತಿಳಿಸಿದರು.

ಈ ಸಂಬAಧ ಮಾತನಾಡಿದ ಚೆಸ್ಕಾಂ ಅಧಿಕಾರಿ ಅನಿತಾ, ಪ್ರತಿ ಮಂಟಪದೊAದಿಗೆ ಚೆಸ್ಕಾಂ ಸಿಬ್ಬಂದಿಗಳು ಇರಲಿದ್ದಾರೆ. ಎಲ್ಲಾ ಸಲಹೆಗಳನ್ನು ಸ್ವೀಕರಿಸಿ ಅದರಂತೆ ಕೆಲಸ ನಿರ್ವಹಿಸಲಾಗುವುದು ಎಂದರು.

ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ನವರಾತ್ರಿಯಂದು ಕಾರ್ಯಕ್ರಮ ನೀಡಲು ಬರುವ ಕಲಾವಿದರಿಗೆ ತಕ್ಷಣ ಹಣ ಪಾವತಿಸಲು ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಮಾತನಾಡಿ, ಮಡಿಕೇರಿಯಲ್ಲಿ ಬೀದಿ ದೀಪಗಳ ಸಮಸ್ಯೆ ಇರುವುದನ್ನು ಬಗೆಹರಿಸಬೇಕು. ಅಳವಡಿಸಿದ ಕೆಲ ದಿನಗಳಲ್ಲೆ ದೀಪ ಹಾಳಾಗುತ್ತಿದೆ. ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಗರಸಭಾ ಪೌರಾಯುಕ್ತ ವಿಜಯ, ಟೆಂಡರ್ ಪಡೆದವರು ೨ ವರ್ಷ ದೀಪಗಳ ನಿರ್ವಹಣೆ ಮಾಡಬೇಕು. ಆದರೆ, ಅದು ಆಗುತ್ತಿಲ್ಲ. ಈ ಹಿನ್ನೆಲೆ ಬಿಡುಗಡೆಯಾಗಬೇಕಾದ ಹಣದಲ್ಲಿ ಶೇ ೫ ಅನ್ನು ಠೇವಣಿ ರೂಪದಲ್ಲಿ ಇಡಲಾಗಿರುತ್ತದೆ. ಅದರಿಂದ ಬೇರೆ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸುತ್ತೇವೆ ಎಂದು ಉತ್ತರಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ, ಠೇವಣಿ ರೂಪದಲ್ಲಿ ಇಡುವ ಶೇ. ೫ ಹಣ ನಿರ್ವಹಣೆಗೆ ಸಾಲುವುದಿಲ್ಲ. ಇದನ್ನು ಹೆಚ್ಚಳ ಮಾಡಲು ಕ್ರಮವಹಿಸುವಂತೆ ಸೂಚಿಸಿದರು.

ಮಡಿಕೇರಿಯ ರಸ್ತೆ ಸರಿಪಡಿಸಲು ಪ್ರಮುಖರು ಕೋರಿದರು. ಈ ಬಗ್ಗೆ ಮಾತನಾಡಿದ ಶಾಸಕರು, ಮಳೆಯಾಗುತ್ತಿರುವುದರಿಂದ ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಹಣ ವ್ಯರ್ಥವಾಗದಂತೆ ಕೆಲಸ ನಿರ್ವಹಿಸಲಾಗುತ್ತದೆ ಎಂದರು.

ಎನ್.ಓ.ಸಿ. ಪಡೆಯಲು ಸೂಚನೆ

ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಮಾತನಾಡಿ, ಪ್ರತಿ ಮಂಟಪದಲ್ಲಿ ವಿದ್ಯುತ್ ಹಾಗೂ ಗ್ಯಾಸ್ ಬಳಸುವ ಹಿನ್ನೆಲೆ ಪ್ರತಿ ಮಂಟಪಗಳು ಅಗ್ನಿಶಾಮಕ ದಳ ಹಾಗೂ ಚೆಸ್ಕಾಂನಿAದ ಮುಂಜಾಗ್ರತ ಕ್ರಮವಾಗಿ ನಿರಪೇಕ್ಷಣಾ ಪತ್ರ (ಎನ್.ಓ.ಸಿ.) ಪಡೆಯಬೇಕು. ನಿಗದಿ ಮಾಡಿದ ಸಮಯದಲ್ಲಿ ಮಂಟಪಗಳು ನಗರ ಪ್ರವೇಶಿಸಬೇಕು ಎಂದರು. ಇದಕ್ಕೆ ದಸರಾ ಸಮಿತಿ ಆಕ್ಷೇಪಿಸಿದ ಸಂದರ್ಭ, ಸಚಿವರು ಮಾತನಾಡಿ, ಏಕಗವಾಕ್ಷಿ ಮೂಲಕ ಪಡೆಯುವಂತೆ ಸಲಹೆ ನೀಡಿದರು.

ದಶಮಂಟಪ ಸಮಿತಿ ಅಧ್ಯಕ್ಷ ಮನುಮಂಜುನಾಥ್ ಮಾತನಾಡಿ, ಪಟಾಕಿ ಸಿಡಿಸಲು ಈ ಬಾರಿ ನಿರ್ಬಂಧ ವಿಧಿಸಲಾಗಿದೆ. ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಮಂಟಪಗಳು ಬರಲಿವೆ. ಮಂಟಪಗಳು ೫ ರಿಂದ ೬ ಪ್ರದರ್ಶನ ನಡೆಸಲಿವೆ ಎಂದು ತಿಳಿಸಿದರು.

ಮತ್ತೊಂದು ಸಭೆ ಬಳಿಕ ನಿರ್ಧಾರ

ಪವಿತ್ರ ಕಾವೇರಿ ತೀರ್ಥೋದ್ಭವ ಸಮಯದಲ್ಲಿ ಯಾವುದೇ ಗೊಂದಲಗಳು ಉಂಟಾಗದAತೆ ಎಚ್ಚರವಹಿಸಲು ಸಚಿವರು ಸೂಚಿಸಿದರು.

ಅಕ್ಟೋಬರ್ ೧೭ ರಂದು ತೀರ್ಥೋದ್ಭವ ಇರುವ ಹಿನ್ನೆಲೆ ದಸರಾ ಮುಗಿದ ಬಳಿಕ ಮತ್ತೊಂದು ಸಭೆ ನಡೆಸಿ ಎಲ್ಲಾ ರೀತಿಯ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದರು. ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಭಾಗಮಂಡಲದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಅಲ್ಲಿಂದ ಬಸ್ ಮೂಲಕ ಜನರನ್ನು ಕರೆತರುವ ಚರ್ಚೆಗಳು ನಡೆದವು.

ತೀರ್ಥಸ್ನಾನಕ್ಕೆ ಅವಕಾಶ ನೀಡಲು ಪ್ರಮುಖರು ಕೋರಿದರು. ಜಂಗಲ್ ಕಟ್ಟಿಂಗ್, ರಸ್ತೆ ಸರಿಪಡಿಸಲು ಶಾಸಕರುಗಳು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪ್ರಮುಖರಾದ ಕೋಡಿ ಮೋಟಯ್ಯ, ಎಂ.ಬಿ.ದೇವಯ್ಯ ಸೇರಿದಂತೆ ಇನ್ನಿತರರು ಅಗತ್ಯ ಸಲಹೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ ಹಾಜರಿದ್ದರು.