ಮಡಿಕೇರಿ, ಸೆ. ೧೫: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಆರ್. ವಿಜಯ್ ಉದ್ಘಾಟಿಸಿ ಮಾತನಾಡಿ, ಶಕ್ತಿ ದಿನಪತ್ರಿಕೆ ಜನರ ಭಾವನೆ ಹಾಗೂ ಜೀವನಶೈಲಿಯೊಂದಿಗೆ ಬೆರೆತಿದೆ. ಪತ್ರಿಕೆ ಕೇವಲ ಸುದ್ದಿಗೆ ಸೀಮಿತವಾಗಿರದೆ ಸಾಹಿತ್ಯ, ಆಧ್ಯಾತ್ಮ, ಪ್ರಜ್ಞೆ ಹಾಗೂ ಬುದ್ಧಿವಂತಿಕೆ ಬೆಳೆಸುವ ಲೇಖನ ಪ್ರಕಟಿಸುತ್ತಿರುವುದರಿಂದ ಎಲ್ಲಾ ವರ್ಗದವರಿಗೆ ಪತ್ರಿಕೆ ಇಷ್ಟವಾಗುತ್ತದೆ. ನಮ್ಮ ವಿದ್ಯಾಸಂಸ್ಥೆಯ ಕಟ್ಟಡ ನಿರ್ಮಾಣದಲ್ಲಿ ಶಕ್ತಿ ಪತ್ರಿಕೆಯ ವರದಿಯ ಪಾತ್ರ ದೊಡ್ಡದಿದೆ ಎಂದು ಇದೇ ಸಂದರ್ಭ ತಿಳಿಸಿದರು. ಪತ್ರಿಕೆ ಹಿಂದಿನ ಶಕ್ತಿ ಗೋಪಾಲಕೃಷ್ಣ ಅವರಾಗಿದ್ದು, ಅವರ ಆದರ್ಶ ಹಾಗೂ ಚಿಂತನೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಇಂದಿನ ವಿದ್ಯಾರ್ಥಿಗಳು ಕನ್ನಡ ರಾಯಭಾರಿಗಳಾಗಿರಬೇಕು. ಕನ್ನಡ ಉಳಿವಿಗೆ ಹೋರಾಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿರುವುದು ವಿಪರ್ಯಾಸ. ನಮ್ಮ ಭಾಷೆ ಹೆಬ್ಬಾಗಿಲಾಗಿರಬೇಕು. ಇತರ ಭಾಷೆ ಕಿಟಕಿಯಾಗಿರಬೇಕು. ಪೋಷಕರು ಕೂಡ ವಿದ್ಯಾರ್ಥಿಗಳ ಕನ್ನಡ ಕಲಿಕೆಗೆ ಒತ್ತು ನೀಡಬೇಕು. ಕನ್ನಡ ಶಾಲೆಯಲ್ಲಿ ಓದಿದವರಿಗೆ ಎಲ್ಲಾ ಕ್ಷೇತ್ರದಲ್ಲೂ ಶೇ. ೧೦ ಮೀಸಲಾತಿ ನಿಗದಿ ಮಾಡಿದರೆ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, ಗೋಪಾಲಕೃಷ್ಣ ಅವರ ಜೀವನ, ಅವರ ಸಿದ್ಧಾಂತಗಳು ಸರ್ವಕಾಲಿಕ ಹಾಗೂ ವಿಸ್ತಾರವಾಗಿತ್ತು. ಕಷ್ಟದ ದಿನಗಳಲ್ಲಿಯೂ ಪತ್ರಿಕೆಯನ್ನು ಜನಪರವಾಗಿ ತಂದರು. ಜನ ಹಾಗೂ ಜಿಲ್ಲೆಯ ಪರ ಬರವಣಿಗೆ ಮೂಲಕ ಸಮಾಜವನ್ನು ಎಚ್ಚರಿಸಿ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಅಂದಿನ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರಿಗೆ ಅತ್ಯಂತ ಆತ್ಮೀಯರಾಗಿದ್ದರು ಕೂಡ ಆಡಳಿತ ವ್ಯವಸ್ಥೆಯಲ್ಲಿನ ತಪ್ಪುಗಳನ್ನು ತೀಕ್ಷ÷್ಣವಾಗಿ ಟೀಕಿಸುವ ಮೂಲಕ ತಮ್ಮ ಬದ್ಧತೆ ಪ್ರದರ್ಶಿಸುತ್ತಿದ್ದರು ಎಂದು ಸ್ಮರಿಸಿದರು.

ಸಣ್ಣ ಕಥೆಗಳ ಕುರಿತು ಸರಕಾರಿ ಕನ್ನಡ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕೆ.ಬಿ.ಗೌರಿ ಮಾತನಾಡಿ, ಜನಪದಗಳಿಂದ ಕಥೆ ಹುಟ್ಟಿದೆ. ಒಂದು ವಿಷಯದ ಕುರಿತು ಹಿಂದೆ ಹೇಳುತ್ತಿದ ಕಥೆಗಳೇ ಇಂದು ಸಾಹಿತ್ಯದ ಸ್ವರೂಪ ಪಡೆದುಕೊಂಡಿದೆ. ಕಥೆಗಳು ಎಲ್ಲಾ ವರ್ಗದವರು ಇಷ್ಟಪಡುವ ವಿಚಾರ. ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ ಎಂಬ ಹಲವು ವಿಧಗಳಲ್ಲಿ ಕಥೆಗಳನ್ನು ಹೇಳಬಹುದಾಗಿದೆ. ಇಂದು ಕಥೆ ಹೇಳಿಕೊಡುವುದು ಕಡಿಮೆಯಾಗಿದೆ. ಮೊಬೈಲ್ ಗೀಳು ಹೆಚ್ಚಾಗಿದೆ. ಮಕ್ಕಳನ್ನು ಮೊಬೈಲ್ ನುಂಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ದಿ. ಗೋಪಾಲಕೃಷ್ಣ ಅವರ ಸಾಮಾಜಿಕ ಬದ್ಧತೆಯನ್ನು ಸ್ಮರಿಸಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ. ಕಾಮತ್, ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಜಾಂಜಿ ಜೋಯಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವಿಜೇತರಿಗೆ ಬಹುಮಾನ

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕಥಾ ಸ್ಪಧೆಯಲ್ಲಿ ಕಿಗ್ಗಾಲು ಗಿರೀಶ್ ಪ್ರಥಮ, ಕಟ್ರತನ ಲಲಿತಾ ದ್ವಿತೀಯ ಹಾಗೂ ಸಹನಾ ಕಾಂತಬೈಲು ತೃತೀಯ ಸ್ಥಾನ ಪಡೆದುಕೊಂಡರು. ಅವರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿನಿಯರ ತಂಡ ನಾಡಗೀತೆ ಹಾಡಿದರು. ಕ.ಸಾ.ಪ. ಗೌರವ ಕಾರ್ಯದರ್ಶಿ ರಂಜಿತ್ ನಿರೂಪಿಸಿ, ಪ್ರತಿಮಾ ಹರೀಶ್ ರೈ ಸ್ವಾಗತಿಸಿ, ಕೋಶಾಧಿಕಾರಿ ಗೀತಾ ಗಿರೀಶ್ ವಂದಿಸಿದರು.