ಸೋಮವಾರಪೇಟೆ, ಸೆ. ೧೬: ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವ ಮಾರ್ಗದ ಜಂಕ್ಷನ್‌ನಲ್ಲಿ ಖಾಸಗಿ ವ್ಯಕ್ತಿಯೋರ್ವರು ಸ್ವಾಧೀನದಲ್ಲಿ ಇರಿಸಿಕೊಂಡಿದ್ದ ಜಾಗವನ್ನು ಪಟ್ಟಣ ಪಂಚಾಯಿತಿ ವಶಕ್ಕೆ ಪಡೆಯಲಾಯಿತು.

ಕಳೆದ ಕೆಲ ದಶಕಗಳ ಹಿಂದೆ ಪಂಚಾಯಿತಿಗೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಬಳಸಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಗಮಹರಿಸಿದ ಪಂಚಾಯಿತಿ ತೆರವುಗೊಳಿಸುವಂತೆ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ನಡುವೆ ಖಾಸಗಿ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರು. ದಾಖಲಾತಿಗಳನ್ನು ಪರಿಶೀಲಿಸಿದ ನ್ಯಾಯಾಲಯ ವಿಚಾರಣೆ ನಡೆಸಿ ಪಂಚಾಯಿತಿ ಪರವಾಗಿ ತೀರ್ಪು ನೀಡಿತ್ತು. ಕಳೆದ ಮೂರೂವರೆ ವರ್ಷಗಳ ಹಿಂದೆಯೇ ಪಂಚಾಯಿತಿ ಪರವಾಗಿ ತೀರ್ಪು ಬಂದಿದ್ದರೂ ಸ್ವಾಧೀನ ಪ್ರಕ್ರಿಯೆ ನಡೆದಿರಲಿಲ್ಲ.

ಇಂದು ಬೆಳಿಗ್ಗೆ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿಗಳ ತಂಡ, ಜೆಸಿಬಿ ಯಂತ್ರದ ಮೂಲಕ ಕಟ್ಟಡಗಳ ಪರಿಕರಗಳನ್ನು ತೆರವುಗೊಳಿಸಿ ಪಂಚಾಯಿತಿ ವಶಕ್ಕೆ ಜಾಗವನ್ನು ಪಡೆಯಲಾಯಿತು. ಈ ಸಂದರ್ಭ ಸದಸ್ಯ ಮಹೇಶ್, ಆರೋಗ್ಯ ಅಧಿಕಾರಿ ಜಾಸಿಂ ಖಾನ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.