ಸೋಮವಾರಪೇಟೆ, ಸೆ. ೧೪: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಮೂಲತಃ ಸೋಮವಾರಪೇಟೆ ಹರಗ ಗ್ರಾಮದ ಹೆಮ್ಮಟ್ಟೀರ ಪಿ. ಹೇಮಾವತಿ ಅವರು ಭಾಜನರಾಗಿದ್ದಾರೆ.
ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸರ್ಕಾರಿ ನೌಕರರ ದಿನಾಚರಣೆ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಮೂಲತಃ ಸೋಮವಾರಪೇಟೆ ತಾಲೂಕು ಹರಗ ಗ್ರಾಮದ ಹೆಚ್.ಕೆ. ಪೊನ್ನಪ್ಪ ಹಾಗೂ ಈರಮ್ಮ ಅವರ ಪುತ್ರಿಯಾಗಿರುವ ಹೇಮಾವತಿ ಅವರು, ಪ್ರಸ್ತುತ ಬೆಂಗಳೂರು ಇಂದಿರಾ ನಗರದ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ೨೪ ವರ್ಷಗಳಿಂದ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು, ಕೊರೊನಾ ಸಂದರ್ಭ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.