ಕಣಿವೆ, sಸೆ. ೧೪: ಈ ಬಾರಿ ನಿಲ್ಲದ ನಿರಂತರ ಮಳೆಯಿಂದಾಗಿ ಕೃಷಿಕನ ಬದುಕು ಮೂರಾಬಟ್ಟೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾಡಿದ ಮಾರಕ ಕೊರೊನಾದ ಹೊಡೆತದಿಂದಾಗಿ ಆದ ಆರ್ಥಿಕ ಸಂಕಷ್ಟದಿAದ ಹೊರಬಾರದ ಕೃಷಿಕನಿಗೆ ಈ ಬಾರಿ ಕಾಡಿದ ವರುಣನ ಹೊಡೆತ ಮತ್ತಷ್ಟು ಕಂಗಾಲು ಮಾಡಿದೆ. ಇದರಿಂದಾಗಿ ಕೃಷಿಕನ ಬದುಕು ಕೃಷವಾಗಿದೆ. ಕಳೆದ ಏಪ್ರಿಲ್ನಿಂದ ಈಗಿನ ಸೆಪ್ಟೆಂಬರ್ವರೆಗೂ ನಿರಂತರವಾಗಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಭೂಮಿ ಸಂಪೂರ್ಣ ಶೀತಮಯವಾಗಿದೆ.
ಯಾವ ಭೂಮಿಯಲ್ಲಿ ೫೦೦ ರಿಂದ ೧೦೦೦ ಅಡಿಗಳಷ್ಟು ಕೊರೆದರೂ ನೀರು ಬರುತ್ತಿರಲಿಲ್ಲವೋ ಅಂತಹ ಬರಡು ಭೂಮಿಯಲ್ಲೂ ಈಗ ಶೀತಾಂಶ ಮಡುಗಟ್ಟಿ ನೀರು ಜಿನುಗುತ್ತಿದೆ. ಎರೆ ಮಣ್ಣಿನ ಭೂಮಿ, ಕೆಬ್ಬೆ ಮಣ್ಣಿನ ಭೂಮಿಯಲ್ಲಂತೂ ನೇಗಿಲಿನಿಂದ ಉಳುಮೆ ಮಾಡಲಾರದಷ್ಟು ಭೂಮಿಯ ಮಣ್ಣು ಅಂಟುತ್ತಿದೆ. ಇದರಿಂದಾಗಿ ಭೂಮಿಯನ್ನು ಉಳುಮೆ ಮಾಡಿ ಮಣ್ಣನ್ನು ಹದಗೊಳಿಸಿ ಬಿತ್ತನೆ ಬೀಜವನ್ನು ಮಣ್ಣಿನಲ್ಲಿ ಚೆಲ್ಲಲು ಆಗದಷ್ಟರ ಮಟ್ಟಿಗೆ ಭೂಮಿ ಮಳೆಯ ನೀರನ್ನು ಕುಡಿದಿದೆ. ಇನ್ನೂ ಕುಡಿಯುತ್ತಲೇ ಇದೆ.
ಬೆಳೆ ಹಾನಿ
ನೀರಾವರಿ ಭೂಮಿಯಲ್ಲಿರಲಿ, ಅರೆ ನೀರಾವರಿ ಭೂಮಿಯಲ್ಲೂ ಕೂಡ ಉಳುಮೆ ಮಾಡಿ ಬೀಜ ಬಿತ್ತನೆ ಮಾಡಲಾಗದ ದುಸ್ಥಿತಿ ನಿರ್ಮಾಣವಾಗಿರುವ ಕಾರಣ ಸಾಮಾನ್ಯ ಕೃಷಿಕನ ಕನಿಷ್ಟ ಮೂಲ ಆದಾಯವಾದ ಜೋಳದ ಬೆಳೆ ಹಾಳಾಗಿದೆ.
ಅಂದರೆ ಎಡಬಿಡದೇ ನಿರಂತರವಾಗಿ ಸುರಿದ ಮಳೆಗೆ ಜೋಳದ ಬೆಳೆ ಸಮೃದ್ಧವಾಗಿ ಬೆಳೆದು ಫಲ ಬಿಡಲಾಗದಷ್ಟರ ಮಟ್ಟಿಗೆ ವರುಣನ ಆಘಾತವಾಗಿದೆ. ಜೋಳದ ಫಸಲು ಶೀತಕ್ಕೆ ಸಿಲುಕಿ ಸಾಕಷ್ಟು ನಷ್ಟ ಸಂಭವಿಸಿದೆ.
ವಾಣಿಜ್ಯ ಬೆಳೆಗಳು ಹಾನಿ
ವಾಣಿಜ್ಯ ಬೆಳೆಗಳಾದ ಶುಂಠಿ, ಕಾಫಿ, ಮೆಣಸು, ಏಲಕ್ಕಿ ಮೊದಲಾದ ಬೆಳೆಗಳಿಗೂ ಈ ಮಳೆ ಬೆಳೆಯ ಸಂಕಷ್ಟವನ್ನೊಡ್ಡಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕ ಹೊಲ ಗದ್ದೆಗಳಿಗೆ ಇಳಿದು ಕೆಲಸ ಮಾಡಲಾಗಷ್ಟು ಮಳೆ ಕಿರಿ ಕಿರಿ ಉಂಟು ಮಾಡಿದೆ.
ಉದಾಹರಣೆಗೆ ಬೆಳೆಯುತ್ತಿರುವ ಶುಂಠಿ ಫಸಲಿಗೆ ಗುದ್ದಲಿ ಹಿಡಿದು ಮಣ್ಣು ಕೊಡಲಾಗುತ್ತಿಲ್ಲ.
(ಮೊದಲ ಪುಟದಿಂದ) ಕಾಫಿ ತೋಟಕ್ಕೆ ಇಳಿದು ಕೆಲಸ ಮಾಡಲಾಗುತ್ತಿಲ್ಲ. ಮಾರಕ ರೋಗಗಳ ಹತೋಟಿಗೆ ತರಲು ಮಳೆಯಿಂದಾಗಿ ಯಾವುದೇ ರಸಾಯನಿಕಗಳನ್ನು ಸಿಂಪಡಿಸಲಾಗುತ್ತಿಲ್ಲ.
ಕರಗುತ್ತಿರುವ ತರಕಾರಿ ಬೆಳೆಗಳು
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಕಾಯಿಪಲ್ಯೆ ಬೆಳೆಯುವ ಕೃಷಿಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಸಾಲ ಮಾಡಿ ಕಿರಾಣಿ ಅಂಗಡಿಗಳಲ್ಲಿ ಸೊಪ್ಪು ತರಕಾರಿ ಕಾಯಿಪಲ್ಯೆಗಳ ಬಿತ್ತನೆ ಬೀಜಗಳನ್ನು ಕೊಂಡು ತಂದು ಬಿತ್ತನೆ ಮಾಡಿರುವ ಕೃಷಿಕರಿಗು ಮಳೆ ಆಘಾತವನ್ನುಂಟು ಮಾಡಿದೆ.
ಅಂದರೆ ಬಿತ್ತನೆ ಮಾಡಿದ ಬೀಜಗಳು ಮಳೆಯಿಂದಾಗಿ ಮೊಳಕೆಯೊಡೆಯದೆ ಮಣ್ಣಿನಲ್ಲೇ ಕರಗುತ್ತಿವೆ. ಇದರಿಂದಾಗಿ ತರಕಾರಿ ಬೆಲೆಗಳು ಗಗನಕ್ಕೇರುತ್ತಿವೆ.
ಸ್ಥಳೀಯ ಕೃಷಿಕರು ಸಮೃದ್ಧವಾಗಿ ಮೆಣಸಿನಕಾಯಿ, ಬೀನ್ಸ್, ಟೊಮಾಟೊ, ಎಲೆಕೋಸು, ಹೂಕೋಸು ಮೊದಲಾದ ತರಕಾರಿ ಬೆಳೆಗಳನ್ನು ಬೆಳೆದಾಗ ಉತ್ತಮವಾದ ಬೆಲೆ ಸಿಗದೇ ಬೆಳೆದ ತರಕಾರಿಗಳನ್ನು ರಸ್ತೆಯಲ್ಲೇ ಸುರಿದ ದಿನಗಳು ಉಂಟು. ಆದರೆ ಈಗ ಮಳೆಯಿಂದಾಗಿ ತರಕಾರಿ ಬೆಳೆಗಳು ಬೆಳೆಯುತ್ತಿಲ್ಲ. ಬೆಲೆ ಮಾತ್ರ ಕೊಂಡುಕೊಳ್ಳಲಾರದಷ್ಟು ಗಗನಕ್ಕೇರುತ್ತಿವೆ.
ಹಾಲಿನಲ್ಲೂ ಅಧಿಕ ನೀರಿನಂಶ
ಇತ್ತ ಕೃಷಿಕನ ಆರ್ಥಿಕ ಮೂಲಾಧಾರವಾಗಿರುವ ಹೈನುಗಾರಿಕೆಯ ಮೇಲು ಮಳೆ ಪ್ರಭಾವ ಬೀರುತ್ತಿದೆ. ಅಂದರೆ ಹಾಲು ಕೊಡುವ ಹಸುಗಳು ತಿನ್ನುವ ಹಸಿರು ಮೇವಿನಲ್ಲಿ ನೀರಿನ ಅಂಶ ಹೆಚ್ಚಾಗಿರುವ ಕಾರಣ ಹಾಲಿನಲ್ಲಿ ನೀರಿನ ಅಂಶ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.
ಏಕೆಂದರೆ ಹಾಲು ಕೊಡುವ ಜಾನುವಾರುಗಳನ್ನು ಬಯಲು ಭೂಮಿಯಲ್ಲಿ ಸ್ವಾಭಾವಿಕವಾಗಿ ಬೆಳೆದ ಹುಲ್ಲಿನಲ್ಲಿ ಮೇಯಲು ಸಾಧ್ಯವಾಗದ ಕಾರಣ ಕಟ್ಟಿದ ಕೊಟ್ಟಿಗೆಯಲ್ಲಿಯೇ ಕಟ್ಟಿ ಬೆಳೆಸಿದ ಹುಲ್ಲು ಕೊಯ್ದು ತಂದು ತಿನ್ನಿಸುವ ಕಾರಣ ಹಾಲು ಕೂಡ ನೀರಾಗುತ್ತಿದೆ ಎಂಬುದು ಕೆಲವು ಹೈನು ಸಹಕಾರ ಸಂಘಗಳ ವಾದವಾಗಿದೆ.
ತಗ್ಗು ಭೂಮಿಯಲ್ಲಿ ಇಂಗದ ನೀರು
ಕಳೆದ ಐದಾರು ತಿಂಗಳಿAದಲೂ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿ ನೀರನ್ನು ಕುಡಿದು ಹೆಚ್ಚಾದ ನೀರನ್ನು ಉಗುಳುತ್ತಿದೆ. ಅಂದರೆ ಅಂತರ್ಜಲದ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ನೀರು ಇಂಗುತ್ತಿಲ್ಲ.
ತಗ್ಗು ಪ್ರದೇಶಗಳ ಭೂಮಿಯಂತು ಕೆರೆಗಳಂತಾಗಿವೆ. ಎತ್ತ ಕಡೆಯೂ ಕಾಲುವೆ ತೆಗೆದು ನೀರನ್ನು ಹೊರಳಿಸಲಾಗುತ್ತಿಲ್ಲ. ಆದ್ದರಿಂದ ಇಂತಹ ಭೂಮಿಯಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ.
ಎಲ್ಲೆಲ್ಲೂ ತುಂಬಿದ ಕೆರೆ ಕಟ್ಟೆಗಳು
ಈ ಬಾರಿ ತಗ್ಗದ ವರುಣನ ಅಬ್ಬರದಿಂದಾಗಿ ಬರಡಾಗಿದ್ದ ಕೆರೆ ಕಟ್ಟೆಗಳು, ತೊರೆಗಳು ತುಂಬಿ ಕೋಡಿ ಬಿದ್ದಿವೆ. ಕೆಲವು ಕಡೆಗಳಲ್ಲಿ ಕೆರೆಗಳ ಕೋಡಿ ಒಡೆದು ಸಾಕಷ್ಟು ನಷ್ಟವೂ ಆಗಿರುವುದರಿಂದ ಮುನ್ನೆಚ್ಚರಿಕೆ ವಹಿಸಿದ ಕೆಲವು ಗ್ರಾಮಸ್ಥರು ತಮ್ಮೂರಿನ ಕೆರೆಗಳ ಕೋಡಿಯನ್ನು ಮೊದಲೇ ತೆರೆದು ಹೆಚ್ಚುವರಿ ನೀರನ್ನು ಹೊರಗೆ ಹರಿಸಿದ್ದಾರೆ.
ಉಕ್ಕಿ ಹರಿದ ಕೊಳವೆ ಬಾವಿಗಳು
ಹಲವೆಡೆಗಳಲ್ಲಿ ಕೊರೆದ ಕೊಳವೆ ಬಾವಿಗಳಲ್ಲಿ ಈ ಹಿಂದೆ ನೀರೇ ಬರುತ್ತಿರಲಿಲ್ಲ. ಆದರೆ ಈಗ ಸತತವಾದ ಮಳೆಯಿಂದಾಗಿ ನೀರು ಕೊಳವೆ ಬಾವಿಗಳಲ್ಲಿ ಉಕ್ಕಿ ಹರಿಯಲಾರಂಭಿಸಿದೆ.
ಕೂಡಿಗೆಯ ಕೃಷಿ ಇಲಾಖೆಗೆ ಸೇರಿದ ಕೊಳವೆ ಬಾವಿಯ ಕೊಳವೆಯಿಂದ ಉಕ್ಕಿ ಹರಿದ ನೀರು ಕೂಡಿಗೆ ಡಯಟ್ನ ಕ್ರೀಡಾಂಗಣದಲ್ಲಿ ಹರಿದು ನಿಂತು ಕ್ರೀಡಾಂಗಣ ಗದ್ದೆಯ ಸ್ವರೂಪವಾಗಿದೆ.
ಒಟ್ಟಾರೆ, ಈ ಬಾರಿ ಮಳೆ ಕೃಷಿಕರು ಸೇರಿದಂತೆ ಜನವಸತಿಗೆ ವರುಣಾಘಾತ ನೀಡಿದೆ.
ಈ ಹಿಂದೆ ಮಳೆ ಇಲ್ಲದೇ ಬೆಳೆ ಕೈಕೊಟ್ಟದ್ದನ್ನು ಕಣ್ಣಾರೆ ನೋಡಿದ ಮಂದಿ, ಇದೀಗ ಅಧಿಕ ಮಳೆಯಿಂದಾಗಿ ಇಡೀ ಜನಜೀವನದ ಮೇಲೆ ಆಗುತ್ತಿರುವ ಘೋರ ಪರಿಣಾಮಗಳನ್ನು ನೋಡುವಂತಾಗಿದೆ.
ಒಟ್ಟಿನಲ್ಲಿ ನೆರೆ ರೈತಾಪಿಗಳ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಹೀಗಾಗಿ ಕೃಷಿಕನ ಬದುಕು ಸರ್ಕಾರದ ಯಾವ ಚಿಕಿತ್ಸೆಗೂ ನಿಲುಕದಷ್ಟು ಕೃಷವಾಗಿದೆ.
ಕೊರೊನಾ ಕಳೆದ ಎರಡು ವರ್ಷ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿದರೆ, ಈ ಬಾರಿಯ ವರುಣ ಮತ್ತಷ್ಟು ಅವ್ಯವಸ್ಥೆ ಮಾಡಿದೆ. ಹಾಗಾಗಿ ನೈಸರ್ಗಿಕ ವಿಕೋಪಗಳಿಂದಾಗಿ ಸರ್ಕಾರದ ಸಂಬಳ ಪಡೆÀಯುವ ಕುಟುಂಬಗಳನ್ನು ಹೊರತುಪಡಿಸಿ ಸಾಮಾನ್ಯ ರೈತರ, ಕೂಲಿ ಕಾರ್ಮಿಕರ, ಬಡವರ ಬದುಕು ಬೀದಿಗೆ ಬಂದಿದೆ.
- ಕೆ.ಎಸ್. ಮೂರ್ತಿ