ವೀರಾಜಪೇಟೆ, ಸೆ. ೧೪: ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಭತ್ತದ ಗದ್ದೆ ಮತ್ತು ಕಾಫಿ ತೋಟದಲ್ಲಿ ಬೆಳೆದ ಬಾಳೆ, ಅಡಿಕೆ ಗಿಡ ಮತ್ತು ಬೆಳೆ ನಾಶವಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು ವೀರಾಜಪೇಟೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇನ್ನು ೩ ದಿನಗಳ ಕಾಲ ಗಡುವು ನೀಡಿ ಮರಂದೋಡ ಗ್ರಾಮಸ್ತರಿಂದ ಸಂಘ ಸಂಸ್ಥೆಗಳೊAದಿಗೆ ಅಲ್ಲಿನ ಮುಖ್ಯ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ ಬಳಿಕ ಅರಣ್ಯ ಅಧಿಕಾರಿಗಳ ವಿರುದ್ಧ ಉಚ್ಚನಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ವನ್ಯ ಜೀವಿ ಸಂಘರ್ಷ ಹೋರಾಟಗಾರ ಮೇರಿಯಂಡ ಸಂಕೇತ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಕೇತ್ ಪೂವಯ್ಯ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆನೆ ಮಾನವ ಸಂಘರ್ಷ ಕೊಡಗಿನಲ್ಲಿ ಅನೇಕ ವರ್ಷಗಳಿಂದಲೂ ಮುಂದುವರಿದಿದ್ದು ಅನೇಕರು ಮೃತಪಟ್ಟಿದ್ದಾರೆ. ಕೆಲವರು ಅಂಗವೈಫಲ್ಯರಾಗಿದ್ದಾರೆ. ತೋಟದ ಕೆಲಸ ಮಾಡಲು ಕಾರ್ಮಿಕರು ಮತ್ತು ಮಾಲೀಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೆಲಸ ಮಾಡುವಂತಾಗಿದೆ. ಈ ಗ್ರಾಮದಲ್ಲಿ ಹುಲಿಯ ಹಾವಳಿ ಇದ್ದು ಜನರು ಭಯಬೀತರಾಗಿದ್ದಾರೆ. ಅರಣ್ಯ ಸಚಿವರು ಇತ್ತ ಗಮನ ಹರಿಸಿ ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ ಕಾಡಾನೆ ಇರುವ ಅರಣ್ಯ ಪ್ರದೇಶದಲ್ಲಿ ಸರಿಯಾದ ಕಾರ್ಯಾಚರಣೆ ಹಾಗೂ ವೈಜ್ಞಾನಿಕ ಕಂದಕ ನಿರ್ಮಾಣ ಆಗಬೇಕು. ಕಾಡಾನೆಗಳನ್ನು ಹಿಡಿದು ಬೇರೆ ಕಡೆಗೆ ವರ್ಗ ಮಾಡುವಂತ ಕೆಲಸ ಅಧಿಕಾರಿಗಳು ಮಾಡಬೇಕಾಗಿದೆ, ಆದರೆ ಅರಣ್ಯ ಇಲಾಖೆ ಮೌನ ವಹಿಸಿರುವುದರಿಂದ ಕಾನೂನು ಹೋರಾಟ ಅಗತ್ಯವಾಗಿದೆ ಎಂದರು. ಆನೆ ದಾಳಿಯಿಂದ ನಷ್ಟವಾಗಿರುವ ಗ್ರಾಮದ ರೈತರು ವೀರಾಜಪೇಟೆ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಲಿದ್ದಾರೆ ಎಂದರು.

ಮರಂದೋಡ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ ಮಾತನಾಡಿ ಕಾಡಾನೆಗಳ ಹಾವಳಿಯಿಂದಾಗಿ ತೋಟ ಮತ್ತು ಭತ್ತದ ಗದ್ದೆಯಲ್ಲಿ ಬೆಳೆದ ಬೆಳೆ ನಷ್ಟ ಸಂಭವಿಸಿರುವುದಾಗಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದಾಗ ಆನೆ ಓಡಿಸುವ ನೆಪಹೇಳಿ ಪಠಾಕಿ ಸಿಡಿಸಿ ಒಂದು ತೋಟದಿಂದ ಮತ್ತೋಂದು ತೋಟಕ್ಕೆ ಓಡಿಸುತ್ತಾರೆ. ಮರುದಿನ ಪುನಃ ಆನೆಗಳು ಅದೇ ತೋಟಕ್ಕೆ ಬಂದು ಫಸಲಿಗೆ ಬಂದ ಗಿಡಗಳನ್ನು ಮುರಿದು ನಷ್ಟ ಮಾಡುತ್ತವೆ. ಈ ಸಂಬAಧ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ರೂ,೫೦ ಸಾವಿರ ನಷ್ಟವಾದರೇ ರೂ,೩ ರಿಂದ ೪ ಸಾವಿರ ಕೊಡುತ್ತಾರೆ, ಈ ಸಂಬAಧ ರೈತರು ಸಂಕಷ್ಟದಲ್ಲಿರುವುದಾಗಿ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಕೀಲ ನರೇಂದ್ರ ಕಾಮತ್ ಮಾತನಾಡಿ ಕಾಡಾನೆಗಳ ಹಾವಳಿ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಮರಂದೋಡ ಗ್ರಾಮದ ಪಂಚಾಯಿತಿ ಸದಸ್ಯೆ ಕೆ.ಆರ್.ಲೀಲಾವತಿ, ಮಾಜಿ ಸದಸ್ಯ ಸಿ.ಬಿ.ಪೂಣಚ್ಚ, ಗ್ರಾಮಸ್ಥರಾದ ಮಂದಣ್ಣ, ಗಣಪತಿ, ಟೋನಿ, ಚಿಣ್ಣಪ್ಪ, ಸುಂದರ, ರತ್ನ, ಮುದ್ದಯ್ಯ, ಕಟ್ಟಿ, ಸರು, ವಿಜು, ಮುಂತಾದವರು ಉಪಸ್ಥಿತರಿದ್ದು ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟದ ಬಗ್ಗೆ ಮಾಹಿತಿ ನೀಡಿದರು.