ಸೋಮವಾರಪೇಟೆ, ಸೆ. ೧೪: ಸೋಮವಾರಪೇಟೆ ತಾಲೂಕಿನಿಂದ ಕುಶಾಲನಗರವನ್ನು ವಿಂಗಡಿಸಿ ನೂತನ ತಾಲೂಕು ರಚನೆ ಮಾಡಿದ್ದರೂ ಕಂದಾಯ ಇಲಾಖೆಯಲ್ಲಿ ಸುಧಾರಣೆಗಳಾಗದ ಹಿನ್ನೆಲೆ ಕೆಲವೊಂದು ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.
ಹೆಚ್ಚುವರಿ ತಾಲೂಕು ರಚನೆ ಹಾಗೂ ಹೋಬಳಿ ವರ್ಗಾವಣೆಯಿಂದಾಗಿ ಹಲವಷ್ಟು ವಹಿವಾಟುಗಳು ನಡೆಯುತ್ತಿಲ್ಲ. ಸೋಮವಾರಪೇಟೆ ತಾಲೂಕಿನ ಅಧೀನದಲ್ಲಿದ್ದ ಸುಂಟಿಕೊಪ್ಪ ಹೋಬಳಿಯ ಗರ್ವಾಲೆ, ಮಾದಾಪುರ ಹಾಗೂ ಹರದೂರು ವೃತ್ತಗಳಿಗೆ ಒಳಪಟ್ಟ ಗರ್ವಾಲೆ, ಸೂರ್ಲಬ್ಬಿ, ಕಿಕ್ಕರಳ್ಳಿ, ಮಂಕ್ಯ, ಶಿರಂಗಳ್ಳಿ, ಕೊಪ್ಪತ್ತೂರು, ಕಿರುದಾಲೆ, ಕಡಂದಾಳು, ಜಂಬೂರು, ಕುಂಬೂರು, ಹಾಡಗೇರಿ, ಮೂವತೊಕ್ಲು, ಇಗ್ಗೋಡ್ಲು, ಕಾಂಡನಕೊಲ್ಲಿ, ಗರಗಂದೂರು, ಅಂಜನಗೇರಿ ಬೆಟ್ಟಗೇರಿ ಸೇರಿ ಒಟ್ಟು ೧೬ ಗ್ರಾಮಗಳು ನೂತನ ತಾಲೂಕು ರಚನೆಗೂ ಮುಂಚೆ ಸುಂಟಿಕೊಪ್ಪ ಹೋಬಳಿಗೆ ಒಳಪಟ್ಟಿತ್ತು.
ಇದರಲ್ಲಿ ೧೧ ಮುಖ್ಯ ಹಾಗೂ ಉಳಿದವು ಉಪಗ್ರಾಮಗಳಾಗಿದ್ದು, ಸುಂಟಿಕೊಪ್ಪ ಹೋಬಳಿಯಿಂದ ವಿಂಗಡಿಸಿ ಸೋಮವಾರಪೇಟೆ ತಾಲೂಕಿಗೆ ಪೂರ್ಣವಾಗಿ ಒಳಪಡಿಸಲಾಗಿದೆ. ತಾಲೂಕು ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಇದುವರೆಗೂ ಪಹಣಿಯಲ್ಲಿ ಸೋಮವಾರಪೇಟೆ ಹೋಬಳಿ ಎಂದು ವರ್ಗಾವಣೆ ಆಗಿರುವುದಿಲ್ಲ.
ಇದರಿಂದಾಗಿ ೧೧ಇ, ಪೋಡಿ, ಭೂ ಪರಿವರ್ತನೆಯಂತಹ ಯಾವುದೇ ವಹಿವಾಟು ನಡೆಯುತ್ತಿಲ್ಲ. ಇದರಿಂದ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಯಾವುದೇ ವಹಿವಾಟು ನಡೆಯದೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಆರೋಪಿಸಿದ್ದಾರೆ.
ಎಷ್ಟೋ ಜನ ಭೂಮಿ ಖರೀದಿ ಮಾಡಿ, ಮಾಲೀಕರಿಗೆ ದುಡ್ಡು ಕೊಟ್ಟು ತಮ್ಮ ಹೆಸರಿಗೆ ವರ್ಗಾಯಿಸಲು ಸಾಧ್ಯವಾಗದೇ ಕಷ್ಟ ಪಡುವಂತಾಗಿದೆ. ಮಾಲೀಕರಿಗೆ ಪೂರ್ತಿ ಹಣ ಸಂದಾಯ ಮಾಡಿ ಮನೆ ನಿರ್ಮಿಸುತ್ತಿರುವ ಅನೇಕರು ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಅಲ್ಲದೆ ಅಕ್ರಮ ಸಕ್ರಮ ಫಾರಂ ೫೭ ಗೆ ಕೂಡ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಎಂದು ಸಲೀಂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿನ ಈ ಸಮಸ್ಯೆಯಿಂದಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ತಕ್ಷಣ ಜಿಲ್ಲಾಧಿಕಾರಿಗಳು, ಶಾಸಕರು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರಿಂದ ಈಗಾಗಲೇ ಮನವಿಯನ್ನು ನೀಡಲಾಗಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸಲೀಂ ದೂರಿದ್ದಾರೆ.
ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ತುರ್ತು ಗಮನ ಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.