ಸೋಮವಾರಪೇಟೆ, ಸೆ. ೧೩: ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ತಾ.೧೬ರಂದು ಮೈಸೂರು ಸೆಸ್ಕ್ ಪ್ರಧಾನ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಿದ್ಯುತ್ ಮೀಟರ್ ಸುಡುವ ಚಳುವಳಿಗೆ ತಾಲೂಕಿನಿಂದ ೨೦೦ ಮಂದಿ ಕಾಫಿ ಬೆಳೆಯುವ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್ ತಿಳಿಸಿದ್ದಾರೆ.
ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗು ಬಾಕಿಯಿರುವ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡಬೇಕೆಂದು ಬೇಡಿಕೆ ಮುಂದಿಟ್ಟು ಈ ಹಿಂದೆ ೧೮ ದಿನಗಳ ಅಹೋರಾತ್ರಿ ಧರಣಿ ಪ್ರತಿಭಟನೆಯನ್ನು ರೈತಸಂಘ ಮಾಡಿದೆ.
ಆದರೆ ಸರ್ಕಾರ ಕಾಫಿ ಬೆಳೆಗಾರರಿಗೆ ತಾರತಮ್ಯ ಮಾಡುತ್ತಿದೆ. ಉಚಿತ ವಿದ್ಯುತ್ ಕಲ್ಪಿಸುವ ತನಕ ಹೋರಾಟ ಮುಂದುವರಿಯಲಿದೆ. ಅಂದು ಬೆಳಿಗ್ಗೆ ೧೧ ಗಂಟೆಗೆ ಮೈಸೂರಿನಲ್ಲಿ ಚಳುವಳಿ ಪ್ರಾರಂಭವಾಗಲಿದೆ. ತಾಲೂಕಿನಲ್ಲಿ ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಬಿಡುವುದಿಲ್ಲ. ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.