ವೀರಾಜಪೇಟೆ, ಸೆ. ೧೩ : ತಾನೇ ಜನ್ಮಕೊಟ್ಟ ಇಬ್ಬರು ಮುಗ್ಧ ಮಕ್ಕಳನ್ನು ಹೊಳೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದ ವ್ಯಕ್ತಿಯೋರ್ವನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ೨೦೦೯ ರಲ್ಲಿ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಬಿ. ಪೆಮ್ಮಯ್ಯ ಅವರ ತೋಟಕ್ಕೆ ಕೆಲಸಕ್ಕೆ ಬಂದ ಸುರೇಶ್ ಎಂಬಾತ ತನ್ನ ಪತ್ನಿ ಪ್ರೇಮ ಮತ್ತು ಮಗ ರೂಪೇಶ್ ಹಾಗೂ ಮಗಳು ಧನಿಯ ಅವರೊಂದಿಗೆ ತೋಟದ ಲೈನ್ಮನೆಯಲ್ಲಿ ವಾಸ ಮಾಡುತ್ತಿದ್ದ.
ತನ್ನ ಪತ್ನಿಯೊಂದಿಗೆ ಆಗಿಂದಾಗ್ಗೆ ಕಲಹ ನಡೆಸುತ್ತಿದ್ದ ಸುರೇಶ್, ತನ್ನ ಮಕ್ಕಳು ತನಗೆ ಜನಿಸಿದ ಮಕ್ಕಳಲ್ಲ ಎಂದು ಚಕಾರವೆತ್ತುತಿದ್ದ. ಸುರೇಶ್ನ ಕಿರುಕುಳ ತಾಳಲಾರದೆ ಪತ್ನಿ ಪ್ರೇಮ ಇಬ್ಬರು ಮಕ್ಕಳೊಂದಿಗೆ ತನ್ನ ಮನೆಗೆ ತೆರಳುತ್ತೇನೆ ಎಂದು ಹೇಳುತ್ತಾಳೆ. ಇದರಿಂದ
(ಮೊದಲ ಪುಟದಿಂದ) ಕೋಪಗೊಳ್ಳುವ ಸುರೇಶ್ ಮಕ್ಕಳಾದ ರೂಪೇಶ್, ಧನಿಯ ಅವರುಗಳನ್ನು ಶಾಲೆಯಿಂದ ಕರೆದೊಯ್ದು ಅಮ್ಮತ್ತಿ ಸನಿಹದ ಕೊಮ್ಮೆತೋಡು ಕಿರುಹೊಳೆಯಲ್ಲಿ ತನ್ನ ಇಬ್ಬರೂ ಮಕ್ಕಳ ದೇಹಕ್ಕೆ ಕಲ್ಲುಕಟ್ಟಿ ಮುಳುಗಿಸಿ ಮರಣದ ದಾರಿ ತೋರಿಸಿ ಪರಾರಿಯಾಗುತ್ತಾನೆ.
ಕೆಲ ದಿನಗಳ ಬಳಿಕ ಮಕ್ಕಳ ಶವಗಳು ಹೊಳೆ ಬದಿಯಲ್ಲಿ ಪತ್ತೆಯಾಗುತ್ತದೆ. ತನ್ನ ಪತಿ ಸುರೇಶನೇ ಮಕ್ಕಳನ್ನು ಹತ್ಯೆಮಾಡಿದ್ದಾನೆ ಎಂದು ಪ್ರೇಮ ದಿನಾಂಕ : ೨.೧೦.೨೦೦೯ ರಂದು ವೀರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು. ತನಿಖೆ ಕೈಗೊಂಡ ಆಗಿನ ವೃತ್ತನಿರೀಕ್ಷಕ ಹೆಚ್.ಎಂ. ಶೈಲೇಂದ್ರ ಆರೋಪಿ ಸುರೇಶ್ನನ್ನು ಬಂಧಿಸಿ ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಎಂ. ನಾಗರಾಜ್ ಅವರು, ದಿನಾಂಕ: ೧೩.೧೦.೨೦೧೬ ರಂದು ಆರೋಪಿಯ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು ೫೦ ಸಾವಿರ ದಂಡ, ದಂಡ ವಿಧಿಸಲು ತಪ್ಪಿದ್ದಲ್ಲಿ ೧ ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದರು. ವಸೂಲಿ ಆಗುವ ದಂಡದಲ್ಲಿ ರೂ. ೨೫ ಸಾವಿರ ಹಣವನ್ನು ಪ್ರೇಮ ಅವರಿಗೆ ನೀಡಬೇಕೆಂದು ಸೂಚಿಸಿದ್ದರು. ಈ ತೀರ್ಪಿನ ವಿರುದ್ಧ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದ ಆರೋಪಿ ತನ್ನ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದ.
ಈ ಬಗ್ಗೆ ಪರಿಶೀಲಿಸಿದ ಉಚ್ಚ ನ್ಯಾಯಾಲಯ ಮತ್ತೊಂದು ಬಾರಿ ಈ ಪ್ರಕರಣವನ್ನು ತನಿಖೆ ಮಾಡುವಂತೆ ೨೦೨೨ರಲ್ಲಿ ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೂಚನೆ ನೀಡಿ ೬ ತಿಂಗಳ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸುವಂತೆ ಆದೇಶ ನೀಡಿತ್ತು. ಅದರಂತೆ ಮರು ವಿಚಾರಣೆ ಆರಂಭವಾಗಿ ಪೊಲೀಸ್ ಅಧಿಕಾರಿಗಳು ಸಾಕ್ಷಿಗಳನ್ನೆಲ್ಲ ಮತ್ತೊಮ್ಮೆ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರು ಪಡಿಸಿದರು.
ವಿಚಾರಣೆ ಕೈಗೊಂಡ ವೀರಾಜಪೇಟೆ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಅವರು ಈ ಹಿಂದೆ ದಿನಾಂಕ: ೧೩.೧೦.೨೦೧೬ ರಂದು ಹಿಂದಿನ ನ್ಯಾಯಾಧೀಶರು ನೀಡಿದ್ದ ತೀರ್ಪನ್ನೆ ಎತ್ತಿ ಹಿಡಿದು ಆರೋಪಿಗೆ ಜೀವಾವಧಿ ಕಠಿಣ ಶಿಕ್ಷೆ, ೫೦ ಸಾವಿರ ದಂಡ ವಿಧಿಸಿದ್ದಾರೆ. ನೊಂದವರಿಗೆ ೪೦ ಸಾವಿರ ಪರಿಹಾರವನ್ನು ಕಾನೂನು ಸೇವಾಪ್ರಾಧಿಕಾರದಿಂದ ನೀಡುವಂತೆ ಸೂಚಿಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮ್ಮದ್ ವಾದ ಮಂಡಿಸಿದರು.