ಕುಶಾಲನಗರ, ಸೆ. ೧೩: ಮುಳ್ಳುಸೋಗೆ ಕಂದಾಯ ಗ್ರಾಮ ಹೊರತುಪಡಿಸಿದಂತೆ ಕುಶಾಲನಗರ ಪಟ್ಟಣ ಮತ್ತು ನೆರೆಯ ಕೆಲವು ಗ್ರಾಮಗಳನ್ನು ಒಳಪಟ್ಟಂತೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ವರದಿ ‘ಶಕ್ತಿ’ಯಲ್ಲಿ ಪ್ರಕಟವಾದ ಬೆನ್ನಲ್ಲೇ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಡಳಿತ ಮಂಡಳಿ ಸದಸ್ಯರ ತುರ್ತು ಸಭೆ ತಾ. ೧೪ ರಂದು (ಇಂದು) ಹಮ್ಮಿಕೊಂಡಿದ್ದಾರೆ.
೨೦೨೧ ಡಿಸೆಂಬರ್ ತಿಂಗಳಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಕೆ ಬಗ್ಗೆ ಸರ್ಕಾರದ ಅದೇಶ ಹೊರ ಬಿದ್ದ ನಂತರ ವಿಷಯಕ್ಕೆ ಸಂಬAಧಿಸಿದAತೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಿತ್ತು. ಈ ಸಂದರ್ಭ ಅವಧಿ ಮೀರುವ ಮೊದಲೇ ತಮ್ಮ ಅಧಿಕಾರ ಮೊಟಕುಗೊಳ್ಳುವ ಆತಂಕದ ನಡುವೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಒಟ್ಟು ೨೩ ಸದಸ್ಯರ ಪೈಕಿ ೧೭ ಸದಸ್ಯರು ಗ್ರಾಮವನ್ನು ತಮ್ಮ ಅಧಿಕಾರವಧಿ ಮುಗಿಯುವ ತನಕ (೨೦೨೬ ರ ತನಕ) ಕುಶಾಲನಗರ ಪುರಸಭೆಗೆ ಸೇರಿಸದಂತೆ ನ್ಯಾಯಾಂಗ ಮೊರೆಹೋಗಿದ್ದರು. ಇದೀಗ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಹೊರತುಪಡಿಸಿ ಕುಶಾಲನಗರ ಪುರಸಭೆ ಘೋಷಣೆಯ ಸುಳಿವು ದೊರೆತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಸ್ಥರು ಸಭೆ ನಡೆಸಿ ನಿರ್ಣಯ ಕೈಗೊಂಡಿದ್ದು, ಯಾವುದೇ ಹಂತದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಹೊರಗಿಟ್ಟು, ಕುಶಾಲನಗರ ಪುರಸಭೆ ಘೋಷಣೆಯಾಗಬಾರದೆನ್ನುವ ಹಿನ್ನೆಲೆ ಸಭೆ ನಡೆಸಲು ಮುಂದಾಗಿದ್ದಾರೆ.
ಈ ನಡುವೆ ಗ್ರಾಮ ಪಂಚಾಯಿತಿಯಲ್ಲಿ ಗೊಂದಲದಲ್ಲಿದ್ದ ಕೆಲವು ಸದಸ್ಯರು ತಮ್ಮ ಹಿಂದಿನ ನಿಲುವನ್ನು ದಿಢೀರನೆ ಬದಲಾಯಿಸಿ ಪಂಚಾಯಿತಿಯಲ್ಲಿ ಈ ಹಿಂದೆ ನಡೆದ ತುರ್ತು ಸಭೆಯ ನಿರ್ಣಯವನ್ನು ರದ್ದುಗೊಳಿಸಲು ಒತ್ತಡ ಹಾಕುವ ಬಗ್ಗೆ ಚಿಂತನೆ ಹರಿಸಿರುವುದು ತಿಳಿದುಬಂದಿದೆ. ಯಾವುದೇ ಹಂತದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಕೈಬಿಡದೇ ಕುಶಾಲನಗರ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕೆನ್ನುವುದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆರ್. ಜಯಮ್ಮ ಅವರ ಪ್ರತಿಕ್ರಿಯೆಯಾಗಿದೆ. ಮುಳ್ಳುಸೋಗೆ ಕಂದಾಯ ಗ್ರಾಮ ಕುಶಾಲನಗರದ ಪ್ರಸ್ತಾವಿತ ಪುರಸಭೆಗೆ ವಿಲೀನಗೊಂಡಲ್ಲಿ ತಮ್ಮ ಅಧಿಕಾರವಧಿ ಮೊಟಕುಗೊಳ್ಳುವ ಆತಂಕದ ನಡುವೆ ಗ್ರಾಮ ಪಂಚಾಯಿತಿ ಸದಸ್ಯರು ಗೊಂದಲದಲ್ಲಿದ್ದು, ಇದೀಗ ಕೇವಲ ವರ್ಷದ ಅಧಿಕಾರವಧಿ ಮುಗಿದಿದ್ದು, ಮುಂದಿನ ಅವಧಿಯ ಮೊಟಕುಗೊಳ್ಳುವ ಬಗ್ಗೆ ಚಿಂತೆಯಲ್ಲಿದ್ದಾರೆ. ಇಂದು ನಡೆಯಲಿರುವ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
-ಚಂದ್ರಮೋಹನ್