ವೀರಾಜಪೇಟೆ, ಸೆ. ೧೩: ಯುವಕರು ಕ್ರೀಡೆಗೆ ಮಹತ್ವ ನೀಡಬೇಕು, ದುಶ್ಚಟಗಳಿಗೆ ದಾಸರಾದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಮನಸ್ಸಿಗೆ ಹಿನ್ನಡೆಯಾಗುತ್ತದೆ ಎಂದು ವೀರಾಜಪೇಟೆ ಪುರಸಭೆಯ ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂರ್ಗ್ ಕಾವೇರಿ ಬ್ರಿಗೇಡಿರ‍್ಸ್ ಫುಟ್ಬಾಲ್ ಕ್ಲಬ್ ವೀರಾಜಪೇಟೆಯ ಸದಸ್ಯರಿಂದ ನಗರದ ತಾಲೂಕು ಮೈದಾನದಲ್ಲಿ ನಗರದ ವಿವಿಧೆಡೆಗಳಲ್ಲಿ ಸ್ಥಾಪಿತವಾದ ಗೌರಿ-ಗಣೇಶ ಉತ್ಸವ ಸಮಿತಿಗಳ ನಡುವೆ ನಾಕೌಟ್ ಮಾದರಿಯ ಫುಟ್ಬಾಲ್ ಕ್ರೀಡಾ ಉತ್ಸವ ನಡೆಯಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಡಿ.ಪಿ. ರಾಜೇಶ್ ಅವರು ಕ್ರೀಡೆಗಳಲ್ಲಿ ಯುವಕರಿಗೆ ವಿಪುಲ ಅವಕಾಶ ಗಳಿದ್ದರೂ ಕೆಲವರು ಅವಕಾಶದಿಂದ ವಂಚಿತರಾಗುತ್ತಾರೆ. ಕಾರಣ ದೈಹಿಕವಾಗಿ ಸಮರ್ಥರಾಗದಿರುವುದು. ದುಶ್ಚಟಗಳಿಗೆ ದಾಸರಾಗಿ ಉತ್ತಮ ಅವಕಾಶದಿಂದ ವಂಚಿತರಾಗುತ್ತಿ ರುವುದು ವಿಷಾದನೀಯ ವಿಷಯವಾಗಿದೆ ಎಂದರು.

ಐತಿಹಾಸಿಕ ಗೌರಿ-ಗಣೇಶ ಉತ್ಸವ ಸಮಿತಿ ಒಕ್ಕೂಟದ ಕಾನೂನು ಸಲಹೆಗಾರ ವಕೀಲ ಟಿ.ಪಿ. ಕೃಷ್ಣ ಮಾತನಾಡಿ ಸಮಿತಿಗಳ ಮಧ್ಯೆ ಸಾಮರಸ್ಯ ಬೆಳೆಯಬೇಕು ಎಂದು ಕ್ರೀಡೆಯನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಸಾಯಿನಾಥ್ ನಾಯಕ್, ಉಪಾಧ್ಯಕ್ಷ ಸನ್ನಿ ಕಾವೇರಪ್ಪ, ಅವರು ಮಾತನಾಡಿದರು. ಕ್ರೀಡಾಪಟು ಮೇರಿಯಂಡ ನಿಖಿಲ್ ಬೋಪಯ್ಯ, ಉದ್ಯಮಿ ಸಬಾಸ್ಟೀನ್, ಚೇತನ್ ಶಿವಪ್ಪ, ಹಾಜರಿದ್ದರು.

ಫೈನಲ್ ಪಂದ್ಯಾಟವು ಕಣ್ಮಣಿ ವಿನಾಯಕ ಉತ್ಸವ ಸಮಿತಿ ಮಲೆತಿರಿಕೆ ಬೆಟ್ಟ ಮತ್ತು ಶ್ರೀ ಬಸವೇಶ್ವರ ದೇವಾಲಯ ಜೈನರ ಬೀದಿ ತಂಡಗಳ ಮಧ್ಯೆ ನಡೆಯಿತು. ಪಂದ್ಯಾಟದ ಮೊದಲಾರ್ಧದಲ್ಲಿ ೧ ಗೋಲು ಗಳಿಸಿ ಕಣ್ಮಣಿ ಯುವಕ ಸಂಘ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಬಸವೇಶ್ವರ ತಂಡ ೧ ಗೋಲು ಗಳಿಸಿ ಸಮಬಲ ಸಾಧಿಸಿತು. ಡ್ರಾ ಆದ ಪರಿಣಾಮ ಪೆನಾಲ್ಟಿ ಶೂಟೌಟ್‌ನಲ್ಲಿ ೩-೧ ಗೋಲುಗಳಿಂದ ಶ್ರೀ ಬಸವೇಶ್ವರ ದೇವಾಲಯದ ತಂಡವು ಜಯ ಸಾಧಿಸಿತು.

ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಕ್ರೀಡಾ ಉತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾ ಪಟುಗಳಿಗೆ ವೈಯಕ್ತಿಕ ಸ್ಮರಣಿಕೆಯನ್ನು ಆಯೋಜಕರ ವತಿಯಿಂದ ವಿತರಿಸಲಾಯಿತು. ದೈಹಿಕ ಶಿಕ್ಷಕ ಅಶ್ವತ್ ಮತ್ತು ಫುಟ್ಬಾಲ್ ತೀರ್ಪಗಾರ ಶಿವಪ್ಪ ಪಂದ್ಯಾಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಕ್ರೀಡಾ ಉತ್ಸವದಲ್ಲಿ ಕೂರ್ಗ್ ಕಾವೇರಿ ಬ್ರಿಗೇಡಿರ‍್ಸ್ ಫುಟ್ಬಾಲ್ ಕ್ಲಬ್ ವೀರಾಜಪೇಟೆಯ ಸದಸ್ಯರು, ನಗರದ ವಿವಿಧ ಉತ್ಸವ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.