ಗೋಣಿಕೊಪ್ಪಲು, ಸೆ. ೧೩: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ನಡೆಯುವ ಮಹಿಳಾ ದಸರಾವು ಈ ಬಾರಿ ತಾ. ೨೮ರಂದು ನಡೆಯಲಿದೆ ಎಂದು ಮಹಿಳಾ ದಸರಾ ಸಮಿತಿಯ ಅಧ್ಯಕ್ಷರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಆಗಿರುವ ಚೈತ್ರ ಬಿ. ಚೇತನ್ ತಿಳಿಸಿದರು.

ಗೋಣಿಕೊಪ್ಪಲುವಿನ ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆಗೊಂಡಿರುವ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಚೈತ್ರ ಗೋಣಿಕೊಪ್ಪ ಪಂಚಾಯಿತಿಗೆ ಮಹಿಳಾ ದಸರಾವನ್ನು ಸೀಮಿತಗೊಳಿಸದೆ, ಇಡೀ ತಾಲೂಕು ವ್ಯಾಪ್ತಿಯಲ್ಲಿ ಮಹಿಳೆಯರನ್ನು ಸೇರಿಸಿಕೊಂಡು ಮಹಿಳಾ ದಸರಾ ಆಚರಿಸಲಾಗುವುದು. ಗೋಣಿಕೊಪ್ಪ ಪಂಚಾಯಿತಿಯ ಸುತ್ತಮುತ್ತಲಿನ ಪಂಚಾಯಿತಿಗಳ ಅಧ್ಯಕ್ಷರುಗಳನ್ನು ಹಾಗೂ ಸದಸ್ಯರುಗಳನ್ನು ಸಮಿತಿಯಲ್ಲಿ ಸೇರಿಸಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ,

ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ಜಾನಪದ ನೃತ್ಯ, ಜಾನಪದ ಗೀತೆ, ವೇದಿಕೆಯ ಸ್ಪರ್ಧೆಗಳಾದ ಬೆಂಕಿ ಇಲ್ಲದ ಅಡುಗೆ, ಕಸದಿಂದ ರಸ, ಛಧ್ಮವೇಶ, ಹೂವಿನ ಅಲಂಕಾರ, ವಾಲಗ ನೃತ್ಯ, ಸೇರಿದಂತೆ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ, ಉಪಾಧ್ಯಕ್ಷರಾದ ಎಂ. ಮಂಜುಳ, ಖಜಾಂಚಿ ಮನ್ನಕ್ಕಮನೆ ಸೌಮ್ಯ ಬಾಲು, ಉಪಾಧ್ಯಕ್ಷರಾದ ರಾಣಿ ನಾರಾಯಣ್, ಕಾರ್ಯದರ್ಶಿ ಜಿ.ಕೆ. ಗೀತಾ, ಗೌರವ ಅಧ್ಯಕ್ಷ ನೂರೇರ ರತಿ ಅಚ್ಚಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಮಾಹಿತಿಗಾಗಿ - ೭೦೨೬೭೩೬೫೫೫ - ೯೩೪೩೨೫೭೩೭೭- ೯೪೪೮೭೨೧೦೧೭