ಸೋಮವಾರಪೇಟೆ, ಸೆ. ೧೨: ಯೂತ್ ಐಕಾನ್ ಅಪ್ಪು ಫ್ಯಾನ್ಸ್ ಕ್ಲಬ್ ವತಿಯಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಚಲನಚಿತ್ರದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಚಿತ್ರನಟ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಅವರ ನಿಧನನಂತರ ಅವರು ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಮುಂದುರೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯೂತ್ ಐಕಾನ್ ಅಪ್ಪು ಫ್ಯಾನ್ಸ್ ಕ್ಲಬ್ ಸ್ಥಾಪಿಸಿದ್ದು, ಇದರ ಪ್ರಥಮ ಕಾರ್ಯಕ್ರಮವಾಗಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸುಮನ್ ತಿಳಿಸಿದರು.

ಮುಂದಿನ ದಿನಗಳಲ್ಲಿ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಶಕ್ತರಿಗೆ ನೆರವು ನೀಡುವ ಉದ್ದೇಶವನ್ನೂ ಕ್ಲಬ್ ಹೊಂದಿದ್ದು, ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಕ್ಲಬ್‌ನ ಉಪಾಧ್ಯಕ್ಷ ದೀಪಕ್, ಕಾರ್ಯದರ್ಶಿ ಸುಮಂತ್, ಖಜಾಂಚಿ ಅಭಿಷೇಕ್, ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.