ಸೋಮವಾರಪೇಟೆ, ಸೆ.೧೩ : ಕಾಫಿ ಬೆಳೆಗಾರರ ೧೦ಎಚ್‌ಪಿ ಪಂಪ್‌ಸೆಟ್‌ಗಳಿಗೆ ಸರ್ಕಾರವು ಉಚಿತ ವಿದ್ಯುತ್ ನೀಡಲೇಬೇಕು ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಮಾತನಾಡಿದ ರೈತರು, ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ಉಚಿತ ವಿದ್ಯುತ್ ನೀಡುತ್ತೇವೆ ಎಂದಿರುವುದನ್ನು ಕಾಫಿ ಬೆಳೆಗಾರರು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಅಡಿಕೆ, ಭತ್ತ, ತೆಂಗು, ಹೊಗೆಸೊಪ್ಪ ಇನ್ನಿತರ ಬೆಳೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಬೆಳೆಗಾರರಿಗೆ ಏಕೆ ತಾರತಮ್ಯ ಎಂದು ಗೌಡಳ್ಳಿ ಪೃಥ್ವಿ, ಕೂಗೂರು ದೇವರಾಜ್ ಮತ್ತಿತರರು ಪ್ರಶ್ನಿಸಿದರು. ಜೂನ್ ೩೦ರ ತನಕ ವಿದ್ಯುತ್ ಬಿಲ್‌ನ್ನು ಪಾವತಿಸಬೇಕು. ಜುಲೈ ೧ರಿಂದ ಬರುವ ಬಿಲ್‌ನ್ನು ಪಾವತಿಸಿದ ನಂತರ ಕಟ್ಟಿದ ಹಣ ಫಲಾನುಭವಿಯ ಖಾತೆಗೆ ಜಮೆಯಾಗಲಿದೆ ಎಂದು ಸೆಸ್ಕ್ ಜೆ.ಇ. ಸುದೀಪ್ ಮಾಹಿತಿ ನೀಡಿದರು.

ಇದರಿಂದ ಆಕ್ರೋಶಗೊಂಡ ಬೆಳೆಗಾರರು ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು. ಕಾಫಿಯನ್ನು ಆಹಾರ ಬೆಳೆಯೆಂದು ಸರ್ಕಾರ ಘೋಷಿಸಿದರೆ, ಉಚಿತ ವಿದ್ಯುತ್ ಸಿಗಲಿದೆ. ಅಡಿಕೆಯನ್ನು ಈಗಾಗಲೇ ಆಹಾರ ಬೆಳೆಯೆಂದು ಘೋಷಿಸಲಾಗಿದೆ. ಈ ಬಗ್ಗೆ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರುಗಳು ಪಟ್ಟು ಹಿಡಿದು ಹೋರಾಟ ಮಾಡಬೇಕು ಎಂದು ಸದಸ್ಯ ಅಜ್ಜಳ್ಳಿ ನವೀನ್ ಅಭಿಪ್ರಾಯ ವ್ಯಕ್ತಪಡಿಸಿದರು.

ನೂತನ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ೧೮,೫೦೦ ರೂ.ಗಳನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಅದೇ ಹಾಸನ ಮತ್ತು ಚಾಮರಾಜ ನಗರದಲ್ಲಿ ೨,೫೦೦ ರೂ.ಗಳನ್ನು ವಿಧಿಸಲಾಗುತ್ತಿದೆ. ಈ ತಾರತಮ್ಯ ತೆಗೆಯಬೇಕು ಎಂದು ಗೌಡಳ್ಳಿ ಸುನಿಲ್, ಪೃಥ್ವಿ ಆಗ್ರಹಿಸಿದರು. ಈ ಬೇಡಿಕೆಯನ್ನು ಸೆಸ್ಕ್ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಜೆ.ಇ. ಭರವಸೆ ನೀಡಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧ಕೋಟಿ ರೂ.ಗಳಿಗೆ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಮಾಡಲಾಗಿದೆ. ಆದರೆ ಇದುವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಭರತ್ ಸಭೆಗೆ ತಿಳಿಸಿದರು.

ಕಾಡಾನೆ ಹಾವಳಿಯಿಂದ ಫಸಲು ನಷ್ಟವಾಗುತ್ತಿದೆ. ಅರಣ್ಯ ಇಲಾಖೆಯ ಶಾಶ್ವತ ಪರಿಹಾರದ ಭರವಸೆ ಈಡೇರಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಆನೆಕಂದಕ ನಿರ್ಮಾಣವಾಗಿದೆ. ಕಲ್ಲುಬಂಡೆ ಗಳಿರುವ ಸ್ಥಳಗಳಲ್ಲಿ ಸೋಲಾರ್ ತಂತಿ ಅಳವಡಿಸಬೇಕಾಗಿದೆ. ನಂತರ ಸಮಸ್ಯೆ ಬಗೆಹರಿಯಲಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಜಿ.ಜಿ.ಮಲ್ಲಿಕಾ ವಹಿಸಿದ್ದರು. ಉಪಾಧ್ಯಕ್ಷ ಜಿ.ಜಿ.ಗಣೇಶ್, ನೋಡೆಲ್ ಅಧಿಕಾರಿ ಸತೀಶ್, ಸದಸ್ಯರಾದ ಸುಮಾ, ನವೀನ್, ನಾಗರಾಜ್, ಮಂಜುನಾಥ್, ವೆಂಕಟೇಶ್, ರೋಹಿಣಿ, ವಿಶಾಲಾಕ್ಷಿ, ಗೌರಿ, ಪಿಡಿಒ ಲಿಖಿತಾ ಇದ್ದರು.