ಮಡಿಕೇರಿ, ಸೆ.೧೩ : ವಾರದ ಶುಕ್ರವಾರ ದಿನ ಮಡಿಕೇರಿ ನಗರದಲ್ಲಿ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಬಾರದು ಮತ್ತು ಯಾವುದೇ ದಿನಗಳಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರಮುಖರು ಪ್ರತಿಭಟನೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ವಿವರಿಸಿದರು.

ದೇಶದ ಹೆಮ್ಮೆಯ ವೀರಸೇನಾನಿ, ಕೊಡಗಿನ ಶಿಸ್ತಿನ ಪುತ್ರ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಪ್ರತಿಮೆ ಇರುವ ವೃತ್ತ ಮಡಿಕೇರಿ ನಗರದಲ್ಲಿದೆ. ಇದು ಅತ್ಯಂತ ಗೌರವಯುತ ಪ್ರದೇಶವಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಅಗೌರವದ ವಾತಾವರಣ ಸೃಷ್ಟಿಯಾಗುತ್ತಿದೆ. ಕೊಡಗಿನ ಶಿಸ್ತಿನ ವಾತಾವರಣಕ್ಕೆ ದಕ್ಕೆಯಾಗುತ್ತಿದೆ. ವೃತ್ತದ ಪಕ್ಕದಲ್ಲೇ ಜಿಲ್ಲಾ ಆಸ್ಪತ್ರೆ ಇದೆ, ಅಲ್ಲದೆ ಮೈಸೂರು, ಮಂಗಳೂರು ಹೆದ್ದಾರಿಯೂ ಹಾದು ಹೋಗುತ್ತದೆ.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆ ನಡೆಸುವುದರಿಂದ ಆಸ್ಪತ್ರೆಗೆ ರೋಗಿಗಳನ್ನು ಸಕಾಲದಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಗಾಗಿ ಆ್ಯಂಬ್ಯುಲೆನ್ಸ್ ನಲ್ಲಿ ಬರುವ ಅಥವಾ ಮೈಸೂರು, ಮಂಗಳೂರು ಆಸ್ಪತ್ರೆಗೆ ತೆರಳುವ ರೋಗಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಬಾಕಿಯಾದ ಉದಾಹರಣೆಗಳಿವೆ. ಅಲ್ಲದೆ ನೂರಾರು ವಾಹನಗಳು ಕಿಲೋಮೀಟರ್ ನಷ್ಟು ದೂರ ಸಾಲುಗಟ್ಟಿ ನಿಂತಿರುತ್ತವೆ.

ಗ್ರಾಮೀಣ ಭಾಗದ ಜನರು ಹಾಗೂ ಕೂಲಿ ಕಾರ್ಮಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಸಂತೆ ದಿನವಾದ ಶುಕ್ರವಾರ ಮಡಿಕೇರಿಗೆ ಆಗಮಿಸುತ್ತಾರೆ. ಪ್ರತಿ ಶುಕ್ರವಾರ ಸಾವಿರಾರು ಜನರಿಂದ ಮಡಿಕೇರಿ ನಗರ ತುಂಬಿರುತ್ತದೆ. ಈ ನಡುವೆಯೇ ಪ್ರತಿಭಟನೆಗಳು ನಡೆದಾಗ ವಸ್ತುಗಳ ಖರೀದಿಗಾಗಿ ಬಂದ ಜನರಿಗೆ ತೊಂದರೆ ಎದುರಾಗುತ್ತಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಾರದ ಶುಕ್ರವಾರದ ದಿನ ಮಡಿಕೇರಿ ನಗರದಲ್ಲಿ ಪ್ರತಿಭಟನೆ, ಪ್ರತಿಭಟನಾ ಮೆರವಣಿಗೆಗೆ ಅನುಮತಿ ನೀಡಬಾರದು. ಸಾರ್ವಜನಿಕರು ಹಾಗೂ ರೋಗಿಗಳ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅಥವಾ ರಸ್ತೆ ತಡೆ ಪ್ರತಿಭಟನೆಗೆ ಅವಕಾಶ ನೀಡಬಾರದೆಂದು ಕೆ.ಜಿ.ಪೀಟರ್ ಒತ್ತಾಯಿಸಿದರು.

ಉಪಾಧ್ಯಕ್ಷ ಎಂ.ಹೆಚ್.ಶೌಕತ್, ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್, ಖಜಾಂಚಿ ಎಂ.ಹೆಚ್.ಅಜೀಜ್, ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎA.ಯಾಕುಬ್, ಸಂಘಟನಾ ಕಾರ್ಯದರ್ಶಿ ಎಂ.ಬಿ.ಕೌಶರ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.