ವಾರಣಾಸಿ, ಸೆ. ೧೨: ಜ್ಞಾನವಾಪಿ ಮಸೀದಿಯಲ್ಲಿ ಪ್ರತಿದಿನ ಹಿಂದೂ ದೇವತೆಗಳ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಆರಾಧಕರು ಮಾಡಿದ ಮನವಿಯನ್ನು ಪ್ರಶ್ನಿಸಿ ಅಂಜುಮನ್ ಸಮಿತಿ ಸಲ್ಲಿಸಿದ ಮನವಿಯನ್ನು ವಾರಣಾಸಿಯ ಜಿಲ್ಲಾ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಶೃಂಗಾರ ಗೌರಿ ಮತ್ತು ಇತರ ದೇವತೆಗಳ ಆರಾಧನೆಯ ಹಕ್ಕುಗಳನ್ನು ಕೋರಿ ಮಹಿಳಾ ಫಿರ್ಯಾದಿಗಳ ಪ್ರಕರಣ ವಿಚಾರಣೆಗೆ ಯೋಗ್ಯ ಎಂದು ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ ಆದೇಶಿಸಿದ್ದಾರೆ. ಜ್ಞಾನವಾಪಿ ಶ್ರೀನಗರ ಗೌರಿ ವಿವಾದ ಪ್ರಕರಣದ ತೀರ್ಪು ನೀಡುತ್ತಿರುವ ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರ ಏಕ ಸದಸ್ಯ ಪೀಠವು ಈ ಆದೇಶ ನೀಡಿದ್ದು ಮುಸ್ಲಿಂ ಪರವಾಗಿ ಪ್ರತಿನಿಧಿಸುವ ಅಂಜುಮನ್ ಇಂತೆಜಾಮಿಯಾ ಸಮಿತಿಯು ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯವು ಮುಸ್ಲಿಂ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಹಿಂದೂ ಮಹಿಳೆಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬಹುದು ಎಂದು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ತಾ. ೨೨ ರಂದು ನಡೆಯಲಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಫಿರ್ಯಾದುದಾರರಲ್ಲಿ ಒಬ್ಬರನ್ನು ಪ್ರತಿನಿಧಿಸುವ ಹಿಂದೂ ಪರ ವಕೀಲ ಮನ್ ಭಾದೂರ್ ಸಿಂಗ್, ಮುಸ್ಲಿಂ ಕಡೆಯ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ. ಒಂದು ದಿನದ ಹಿಂದೆ, ವಾರಣಾಸಿಯ ಆಡಳಿತವು ಸಿಆರ್‌ಪಿಸಿಯ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ವಿಧಿಸಿದ್ದು ಎರಡೂ ಸಮುದಾಯಗಳ ಜನರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಿತ್ತು.

ಬಿಬಿಎಂಪಿ ಪಶ್ಚಿಮ ವಲಯ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು, ಸೆ. ೧೨: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪಶ್ಚಿಮ ವಲಯ ಕಚೇರಿ ಮೇಲೆ ಸೋಮವಾರ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪೊಲೀಸ್ ಠಾಣಾಧಿಕಾರಿ ನೀಡಿದ ನಂತರ ನಡೆದ ಮೊದಲ ದಾಳಿ ಇದಾಗಿದ್ದು, ಇಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಕಚೇರಿ ಮೇಲೆ ಲೋಕಾಯುಕ್ತ ಡಿವೈಎಸ್‌ಪಿಗಳಾದ ಮಂಜಯ್ಯ, ಶಂಕರ್ ನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ೪ ಲಕ್ಷ ರೂಪಾಯಿ ಲಂಚದ ಹಣವನ್ನೂ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಖಾತೆ ಬದಲಾವಣೆ ವಿಚಾರಕ್ಕೆ ಸಂಬAಧಿಸಿದAತೆ ದೂರು ನೀಡಲಾಗಿತ್ತು. ಈ ದೂರಿನ ಅನ್ವಯವೇ ದಾಳಿ ನಡೆಸಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸರ್ಕಾರಿ ಆಸ್ತಿ ನುಂಗಲು ಸರ್ಕಾರದಿಂದಲೇ ಕುಮ್ಮಕ್ಕು : ಎಚ್‌ಡಿಕೆ

ಬೆಂಗಳೂರು, ಸೆ. ೧೨: ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರದ ಬಗ್ಗೆ ಸ್ಫೋಟಕ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ಅತಿದೊಡ್ಡ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುವುದಾಗಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನು ಕೊಡಿ, ದಾಖಲೆಗಳನ್ನು ಕೊಡಿ ಎಂದು ಪದೇಪದೆ ನನ್ನನ್ನು ಕೆಣಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ಹೊರಟ ಅತಿದೊಡ್ಡ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಪಕ್ಷ ಸಹಕರಿಸಬೇಕು. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಬೇಕು. ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿರುವುದು ಈ ಸರ್ಕಾರದ ಹಗರಣಗಳ ಒಂದು ಸ್ಯಾಂಪಲ್ ಮಾತ್ರ. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲಿ ಸಾಕು ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ಸುಖಾಸುಮ್ಮನೆ ಸದನ ಸಮಯವನ್ನು ಹಾಳು ಮಾಡಲಾರೆ. ಇವತ್ತಿನ ಜೆಡಿಎಲ್ ಪಿ ಸಭೆಯಲ್ಲಿಯೂ ಈ ವಿಷಯ ಸೇರಿ ಹಲವಾರು ವಿಚಾರವಾಗಿ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಬೆಂಗಳೂರು ನಗರ ಸೇರಿ ೨೨ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಿಂದ ದೊಡ್ಡ ಮಟ್ಟದ ನಷ್ಟವಾಗಿದೆ. ಬೆಳೆ ಹಾನಿ, ಮನೆ ಕುಸಿತವೂ ಆಗಿದೆ. ಈ ಬಗ್ಗೆ ಸದನದಲ್ಲಿ ವಿವರವಾಗಿ ಚರ್ಚೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ : ಅತಿಥಿ ಉಪನ್ಯಾಸಕನ ಬಂಧನ

ಬೆಳಗಾವಿ, ಸೆ. ೧೨: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ಹಗರಣಕ್ಕೆ ಸಂಬAಧಿಸಿದAತೆ ಮತ್ತೊಂದು ಬಂಧನವಾಗಿದ್ದು, ಆ ಮೂಲಕ ಬಂಧಿತರ ಸಂಖ್ಯೆ ೧೮ಕ್ಕೇರಿಕೆಯಾಗಿದೆ. ಬೆಳಗಾವಿಯಲ್ಲಿ ಪೊಲೀಸರು ನೆಟ್ ಎಕ್ಸಾಂನಲ್ಲಿ ೪೬ ನೇ ರ‍್ಯಾಂಕ್ ಪಡೆದಿದ್ದ, ಹುಕ್ಕೇರಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಆದೇಶ್ ನಾಗನೂರಿ ಎಂಬಾತನನ್ನು ಬಂಧಿಸಿದ್ದಾರೆ. ಈಗಾಗಲೇ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದಲ್ಲಿ ಕಿಂಗ್ ಪಿನ್ ಸಂಜು ಭಂಡಾರಿ, ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿದ್ದ ಮಹಮ್ಮದ್ ಸೇರಿ ೧೮ ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದ ವಿಶೇಷ ತಂಡಗಳು ಸದ್ಯದಲ್ಲೇ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ.

ಹಿಂದೂ ಪರ ಹೋರಾಟಗಾರನಿಗೆ ಬೆದರಿಕೆ ಆರೋಪಿ ಬಂಧನ

ಮAಗಳೂರು, ಸೆ. ೧೨: ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನಿವಾಸಿ ಪ್ರಶಾಂತ್ ಪೂಂಜಾ ಎಂಬವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ೨೧ ವರ್ಷದ ಯುವಕನನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಎಸ್‌ಡಿಪಿಐ ಸದಸ್ಯನಾಗಿರುವ ಅಬ್ದುಲ್ ಸಪ್ರಿತ್ ಅಲಿಯಾಸ್ ಅಬ್ದುಲ್ ಸಫ್ರಿಜ್ ಎಂಬಾತನನ್ನು ಬೆಳ್ಳಾರೆ ಗ್ರಾಮದಲ್ಲಿ ಬಂಧಿಸಲಾಗಿದೆ. ಲಾಡ್ಜ್ವೊಂದರ ಮ್ಯಾನೇಜರ್ ಪ್ರಶಾಂತ್ ನೀಡಿದ ದೂರಿನ ಪ್ರಕಾರ, ಶನಿವಾರ ಕರೆ ಮಾಡಿದ ಆರೋಪಿ ನಿಂದಿಸಿದ್ದಾನೆ. ಆರೋಪಿಯು ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಫೀಕ್‌ನ ಸಹೋದರನಾಗಿದ್ದು, ಪ್ರಶಾಂತ್ ಹಿಂದೂ ಪರ ಹೋರಾಟಗಾರರಾಗಿದ್ದಾರೆ. ವಿಷಯ ತಿಳಿದ ಹಿಂದೂ ಪರ ಸಂಘಟನೆಗಳ ಸದಸ್ಯರು ಬೆಳ್ಳಾರೆ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ನ್ಯಾಯಾಲಯದ ಅನುಮತಿ ಪಡೆದ ನಂತರ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ೫೦೪, ೫೦೬ (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ರಿಷಿಕೇಶ್ ಸೋನಾವಾನೆ ತಿಳಿಸಿದ್ದಾರೆ. ಹೂಡಿದ್ದೇವೆ ಎಂದು ಅವರು ತಿಳಿಸಿದರು.