ಕಣಿವೆ, ಸೆ. ೧೨: ಕೊಡಗು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆ ಎಂಬುದು ಯುವ ಜನರಲ್ಲಿ ಸ್ನೇಹ ಸಾಮರಸ್ಯ ಮೂಡಿಸುವ ಪ್ರಮುಖ ಸಾಧನವಾಗಿದ್ದು, ಕ್ರೀಡಾಳುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದರು.
ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಾರಕ ಕೊರೋನಾ ಭೀತಿಯಿಂದಾಗಿ ಕ್ರೀಡಾ ಕೂಟಗಳನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಜಿಲ್ಲಾಡಳಿತದ ವತಿಯಿಂದ ಕ್ರೀಡಾ ಕೂಟಗಳನ್ನು ನಡೆಸಲಾಗುತ್ತಿದ್ದು ಎಲ್ಲರೂ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ ಎಂದರು.
ಮತ್ತೋರ್ವ ಅತಿಥಿ ಕೊಡಗು ಜಿಲ್ಲಾ ದೈಹಿಕ ಶಿಕ್ಷಣಧಿಕಾರಿ ಸದಾಶಿವ ಪಲ್ಲೇದ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿವಿಧ ಕ್ರೀಡೆಗಳ ತರಬೇತುದಾರರಾದ ವೆಂಕಟೇಶ್, ದಿನಮಣಿ, ಬಿ.ಸಿ. ಮಂಜುನಾಥ್, ಸುರೇಶ್, ವೆಂಕಟೇಶ್, ಮಹಾಬಲ ಮೊದಲಾದವರ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಕೋಕೋ, ಹ್ಯಾಂಡ್ ಬಾಲ್, ನೆಟ್ ಬಾಲ್, ಬ್ಯಾಸ್ಕೆಟ್ ಬಾಲ್, ಅಥ್ಲೆಟಿಕ್ ಮೊದಲಾದ ಕ್ರೀಡೆಗಳು ಜರುಗಿದವು.
ಕ್ರೀಡಾಕೂಟದಲ್ಲಿ ಕ್ರೀಡಾ ಶಾಲೆಯ ಆಡಳಿತಾಧಿಕಾರಿ ಜಯರಾಂ, ಅಂಥೋಣಿ, ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕ ದೇವಕುಮಾರ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಇದ್ದರು.