ವೀರಾಜಪೇಟೆ, ಸೆ. ೧೧: ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾಗಿದ್ದ ಎಸ್.ಹೆಚ್ ಮತೀನ್ ಜೆಡಿಎಸ್ ಪಕ್ಷ ತೊರೆದು ಸುಮಾರು ೭೩ ಜನ ಬೆಂಬಲಿಗರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತೀನ್ ಸೇರಿದಂತೆ ಅಮ್ಮತ್ತಿ ವಲಯದ ಬಿಜೆಪಿ ಮುಖಂಡ ದಿನೇಶ್, ಜೆಡಿಎಸ್ ಪಕ್ಷದ ರಾಜೇಶ್ ನಾಯರ್ ಕೂಡಾ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ಪಕ್ಷ ಸೇರ್ಪಡೆಗೊಂಡ ನಂತರ ಸಭೆಯಲ್ಲಿ ಮಾತನಾಡಿದ ಎಸ್.ಹೆಚ್ ಮತೀನ್, ಕಾಂಗ್ರೆಸ್ ಪಕ್ಷದ ಪ್ರಜಾತಂತ್ರ ಸಿದ್ಧಾಂತಗಳು ಪಕ್ಷ ಸೇರ್ಪಡೆಗೆ ಕಾರಣ. ಈ ಪಕ್ಷದಲ್ಲಿ ನನಗೆ ಯಾವ ಸ್ಥಾನಮಾನವೂ ಬೇಡ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದ ಅವರು, ಪ್ರಸ್ತುತ ದೇಶದ ಪರಿಸ್ಥಿತಿ ಹದಗೆಟ್ಟಿದೆ. ಸಂವಿಧಾನಕ್ಕೆ ಧಕ್ಕೆ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ, ರಾಜಕೀಯದಲ್ಲಿ ಯಾರು ಯಾರಿಗೂ ವೈರಿಗಳಲ್ಲ. ರಾಜಕೀಯದಲ್ಲಿ ತಂತ್ರಗಾರಿಕೆ ಇರಬೇಕು ಕುತಂತ್ರ ಇರಬಾರದು. ಕಾರ್ಯಕರ್ತರ ನಡುವೆ ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಎಲ್ಲರೂ ಸಂಘಟನೆಗೆ ಮಹತ್ವ ನೀಡಿ, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎನ್ನುವುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಕಾAಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಮತೀನ್ ಅವರ ಪಕ್ಷ ಸೇರ್ಪಡೆ ಸಂತಸ ತಂದಿದೆ. ಯಾವುದೇ ರಾಜಕೀಯ ಪಕ್ಷಕ್ಕೂ ಧರ್ಮ ಅವರ ವೈಯಕ್ತಿಕ ಬದುಕಿಗೆ ಸೀಮಿತವಾಗಿರಬೇಕು. ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಧರ್ಮವನ್ನು ಬಳಕೆ ಮಾಡಬಾರದು ಎಂದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಕಾಂಗ್ರೆಸ್ ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ ಉಪಸ್ಥಿತರಿದ್ದರು.

ಕಾಂಗ್ರೆಸ್ ಕಚೇರಿ ಉದ್ಘಾಟನೆ

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಕಚೇರಿಯನ್ನು ನಗರದ ರಾಮಮೂರ್ತಿ ರಸ್ತೆಯಲ್ಲಿ ಉದ್ಘಾಟನೆ ಮಾಡಲಾಯಿತು.

ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಕಚೇರಿಯನ್ನು ಉದ್ಘಾಟಿಸಿದರು. ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಪಿ.ಬಿದ್ದಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.