ನಾಪೋಕ್ಲು, ಸೆ. ೧೧: ಎಲ್ಲೆಂದರಲಲ್ಲಿ ಸ್ವಚ್ಛಂದವಾಗಿ ವಿಹರಿಸುವ ಕೊಕ್ಕರೆಗಳು. ಕರ್ಣಾ ನಂದಕವಾದ ಕಲರವದ ಜತೆಗೆ ಅವುಗಳನ್ನು ವೀಕ್ಷಿಸುವದೇ ಕಣ್ಣಿಗೆ ಒಂದು ಸಂಭ್ರಮ. ಒಟ್ಟಿನಲ್ಲಿ ಇಲ್ಲಿ ಅವುಗಳದೇ ಸಾಮ್ರಾಜ್ಯ. ಇದು ನಾಪೋಕ್ಲು ಪಟ್ಟಣದ ಸುತ್ತಮುತ್ತಲಿನ ಚಿತ್ರಣ. ಇವುಗಳನ್ನು ನೀವು ವಲಸಿಗರೆಂದಾದರೂ ಕರೆಯಿರಿ. ಅಥವಾ ವರ್ಷಂಪ್ರತಿ ಭೇಟಿ ನೀಡುವ ಪ್ರವಾಸಿಗರು ಎಂದಾದರೂ ಹೇಳಿ. ಏನು ಅಂದರೂ ತಕರಾರಿಲ್ಲ. ಪ್ರವಾಸಿಗರಂತೆ ಇವುಗಳಿಗೆ ತಂಗಲು ಹೋಂಸ್ಟೇ, ರೆಸಾರ್ಟ್ಗಳ ಹಂಗಿಲ್ಲ. ಆತಿಥ್ಯ, ಉಪಚಾರಗಳ ಆಡಂಬರದ ಕೋರಿಕೆಯೂ ಇಲ್ಲ. ಈ ನಿಸರ್ಗ ಸ್ನೇಹಿಗಳು ಮರ ಗಿಡಗಳ ಮೇಲೆ ಎಲ್ಲೆಂದರಲ್ಲಿ ಮನಸೋಯಿಚ್ಛೆ ಬಿಡಾರ ಹೂಡುವ ಹುನ್ನಾರ ಈ ಬೆಳ್ಳಕ್ಕಿಗಳದು. ಎಲ್ಲಿ ಗೂಡು ಕಟ್ಟಲು ಅವಕಾಶವಿದೆಯೊ ಅಲ್ಲೆಲ್ಲ ಗೂಡು ಕಟ್ಟಿಕೊಂಡು ಸಂಸಾರ ಹೂಡುವ ತವಕ ಈ ಸುಂದರ ಅತಿಥಿಗಳದು.

ಇವು ಪ್ರತೀ ಜೂನ್ ತಿಂಗಳಿನಲ್ಲಿ ಇಲ್ಲಿಗೆ ವಲಸೆ ಬಂದು ನೆಲೆಸುವ ಕ್ರಮವನ್ನು ಹಲವಾರು ವರ್ಷಗಳಿಂದ ರೂಢಿ ಮಾಡಿಕೊಂಡಿವೆ. ಕೆಲವು ವರ್ಷಗಳ ಮೊದಲು ಸ್ಥಳೀಯ ನಾಡಕಚೇರಿ ಸುತ್ತ ಮುತ್ತಲ ಪ್ರದೇಶಗಳು, ಕಾವೇರಿ ನದಿ ತೀರದ ಬಿದಿರ ಮೆಳೆಗಳ ಆಸರೆ ಪಡೆಯುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಮರಗಳ ಹನನ ಹಾಗೂ ಬಿದಿರು ಮೆಳೆಗಳು ಕಟ್ಟೆ ರೋಗದಿಂದ ಒಣಗಿದ ಹಾಗೂ ಕಿಡಿಗೇಡಿಗಳ ಉಪಟಳದ ಫಲವಾಗಿ ಜನ ಸಂದಣಿಯಿರುವ ನಾಪೋಕ್ಲು ಪಟ್ಟಣ ಹೃದಯ ಭಾಗದಲ್ಲಿರುವ ವೃಕ್ಷ ನೆಲೆಗಳನ್ನೇ ಆಶ್ರಯಿಸುತ್ತಿವೆ. ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರ ಮತ್ತು ಬೇತು ರಸ್ತೆ ಬದಿಯ ತೋಟಗಳ ಕಾಡು ಮರಗಳು ಸೇರಿದಂತೆ ಸೂಕ್ತವೆನಿಸುವಲ್ಲಿ ಸಂಗಾತಿಗಳ ಜತೆ ಇವು ಸಂಸಾರ ಹೂಡುತ್ತಿವೆ.

ಪುಟ್ಟ ಮರಿಗಳು ಹೂರ ಬಂದ ಸಮಯದಲ್ಲಂತೂ ತಾಯಿ ಮತ್ತು ತಂದೆ ಹಕ್ಕಿಗಳು ತಮ್ಮ ಮರಿಗಳ ರಕ್ಷಣೆ ಹಾಗೂ ಆಹಾರ ಅನ್ವೇಷಣೆಯಲ್ಲಿ ಸದಾ ಮಗ್ನ. ಮರಿಗಳು ಹಾರಡಲು ಕಲಿಯುವ ಸಂದರ್ಭದಲ್ಲಿ ಆಗಸದಲ್ಲಿ ಎಲ್ಲಿ ನೋಡಿದರೂ ದೊಡ್ಡ ಮತ್ತು ಮರಿ ಹಕ್ಕಿಗಳ ಹಾರಟ, ಇವುಗಳು ಉಂಟು ಮಾಡುವ ಕ್ರೀ....ಕ್ರೀ.... ಶಬ್ದದಿಂದ ಈ ಪ್ರದೇಶ ಕೊಕ್ಕರೆ ಬೆಳ್ಳೂರೇ ಎಂಬ ಸಂಶಯ ಉಂಟಾಗುತ್ತದೆ.

ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆ

ಕಳೆದ ಕೆಲವು ವರ್ಷಗಳಿಂದೀಚೆ ಗಮನಿಸಿದರೆ ಇಲ್ಲಿಗೆ ವಲಸೆ ಬರುವ ಬೆಳ್ಳಕ್ಕಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇವುಗಳಿಗೂ ಪರಿಸರ ನಾಶ, ಪರಿಸರ ಮಾಲಿನ್ಯ, ಕೀಟನಾಶಕ ಸಿಂಪಡಣೆಯAತಹ ತೊಂದರೆಗಳು ಹಾಗೂ ಗದ್ದೆ ಕೃಷಿಯ ಕೊರತೆಯಿಂದ ಆಹಾರದ ಕೊರತೆ ಕಾಡತೊಡಗಿದೆ. ಭತ್ತದ ಬೇಸಾಯವೇ ಪ್ರಧಾನವಾಗಿದ್ದ ಈ ಕೆಲ ಹಿಂದಿನ ವರ್ಷಗಳಲ್ಲಿ ಉಳುಮೆ ಮಾಡಿದ ಗದ್ದೆಗಳಲ್ಲಿ, ನಾಟಿ ಮಾಡಿದ ಗದ್ದೆಗಳಲ್ಲಿ, ನೀರಿನೊಳಗೆ ಉದ್ದ ಕಾಲಿನ ಕೊಕ್ಕರೆಗಳು ಸಾಲುಗಟ್ಟಿ ಆಹಾರ ಹಡುಕುತ್ತಾ ನಡೆದಾಡುವುದು ನೋಡಲು ಆನಂದವುAಟು ಮಾಡುವ ದೃಶ್ಯವೇ ಆಗಿತ್ತು. ಆದರೆ ಮಾನವನ ವೈಭವಪೂರಿತ ಜೀವನ ಶೈಲಿ ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಈ ಬೆಳ್ಳಕ್ಕಿಗಳಿಗೆ ದೃಷ್ಟಿತಾಕದೆ ಇರಲಿ ಎಂಬAತೆ ಇವುಗಳ ಮಧ್ಯೆ, ಮಧ್ಯೆ ಹಾರಡುವ, ಬಂದು ಕೂರುವ ನೀರು ಕಾಗೆಗಳನ್ನೂ ಇಲ್ಲಿ ಯಥೇಚ್ಚವಾಗಿ ಕಾಣಬಹುದಾಗಿದೆ. ಆದರೆ ಈ ಸುಂದರ ಬೆಳ್ಳಕ್ಕಿಗಳ ಸೌಂದರ್ಯವನ್ನು ಮನದಣಿಯೆ ಆಸ್ವಾದಿಸುವ ಬಯಕೆ, ಸಮಯವಕಾಶ, ತಾಳ್ಮೆ ನಮ್ಮಲ್ಲಿದೆಯೇ?

- ಪಿ.ವಿ. ಪ್ರಭಾಕರ್