ಮುಳ್ಳೂರು, ಸೆ. ೧೧: ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೆಚ್ಚುತ್ತದೆ ಈ ನಿಟ್ಟಿನಲ್ಲಿ ಕ್ರೀಡಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಜೆ.ಎಸ್. ವಿರೂಪಾಕ್ಷಯ್ಯ ಅಭಿಪ್ರಾಯಪಟ್ಟರು. ಅವರು ಸಮಿಪದ ಆಲೂರುಸಿದ್ದಾಪುರ ಸರಕಾರಿ ಪ್ರಾಥಮಿಕ ಶಾಲೆಯ ಗ್ರಾಮೀಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಯಲ್ಲಿ ಬುದ್ಧಿವಂತಿಕೆ ಮತ್ತು ದೈಹಿಕ ಬೆಳವಣಿಗೆಯಲ್ಲೂ ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಈ ದಿಸೆಯಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕ್ರೀಡಾ ಪ್ರತಿಭೆಗಳನ್ನು ಬೆಳೆಸಬೇಕೆಂದರು.
ಉದ್ಯಮಿ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಇಂದಿನ ಜಾಗತಿಕ ಸ್ಪರ್ಧೆಗಳಲ್ಲಿ ಕ್ರೀಡೆಯೂ ಒಂದಾಗಿದ್ದು ಸರಕಾರ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ, ಕೊಡಗು ಕ್ರೀಡೆಯ ತವರೂರು ಆಗಿದೆ ಆದರೆ ಜನ ಪ್ರತಿನಿಧಿಗಳ ಇಚ್ಚಾಸಕ್ತಿ ಕೊರತೆಯಿಂದ ಕೊಡಗಿನಲ್ಲಿ ವೈಫಲ್ಯತೆಯಾಗುತ್ತಿದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಇಲಾಖೆ ಪರಿವೀಕ್ಷಕ ಬಿ.ಎಂ. ವೇತಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡಾ ಶಿಕ್ಷಣ ಒಂದಾಗಿದ್ದು ಸರಕಾರ, ಶಿಕ್ಷಣ ಇಲಾಖೆ ಶಾಲಾ-ಕಾಲೇಜು ಮಟ್ಟದಲ್ಲಿ ವಿವಿಧ ಮಟ್ಟದ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಗ್ರಾ.ಪA. ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಣಾಧಿಕಾರಿ ಕೆ.ವಿ. ಸುರೇಶ್, ರಾಜ್ಯ ಪ್ರಾ.ಶಾ.ಶಿ. ಸಂಘದ ಸಹ ಕಾರ್ಯದರ್ಶಿ ಹೆಚ್.ಎಸ್. ಚೇತನ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿವ ಪಲ್ಯಾದ್, ಆಲೂರುಸಿದ್ದಾಪುರ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸುಪರ್ಣ ಕೃಷ್ಣಾನಂದ್, ಪ.ಪೂ. ಕಾಲೇಜು ಪ್ರಾಂಶುಪಾಲ ಶಿವಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಬೇಬಿ ಪ್ರಮುಖರಾದ ಹೊಸೂರು ಶಿವಪ್ರಕಾಶ್, ಸತೀಶ್ ಪರ್ಲಕೋಟಿ, ಎ.ಎಸ್. ಶೃತಿ, ಧರ್ಮಪ್ಪ, ಬಸವರಾಜು ಮುಂತಾದವರು ಇದ್ದರು.