ಗೋಣಿಕೊಪ್ಪಲು, ಸೆ.೧೧: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯು ತನ್ನ ಆರ್ಭಟ ಮುಂದುವರಿಸಿದ್ದು ದ.ಕೊಡಗಿನ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.

ಭಾರೀ ಮಳೆಯಿಂದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡAಗಾಲ ಗ್ರಾಮದ ಕೂಲಿ ಕಾರ್ಮಿಕ ಮಂದಮಾಡ ಎ.ಮುಸ್ತಫಾ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯ ಎರಡು ಗೋಡೆ ಸಂಪೂರ್ಣ ಕುಸಿತಗೊಂಡಿದ್ದು ಇನ್ನುಳಿದ ಗೋಡೆಗಳು ಭಾರಿ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿವೆ. ಮಳೆಗೆ ಉಳಿದ ಗೋಡೆಗಳು ಸಂಪೂರ್ಣ ಕುಸಿಯುವ ಭೀತಿಯಲ್ಲಿದೆ.

ಮನೆಯವರು ಕೂಲಿ ಕೆಲಸಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ. ಈ ಘಟನೆಯಿಂದ ಮನೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಾದ ಮೂಕಚಂಡ ಪ್ರಸನ್ನ ಸುಬ್ಬಯ್ಯ ಪರಿಶೀಲನೆ ನಡೆಸಿದರು. ಸ್ಥಳದಿಂದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ. ಸ್ಥಳಕ್ಕೆ ತೆರಳಿದ್ದ ಗ್ರಾ.ಪಂ.ಸದಸ್ಯರಾದ ಪ್ರಸನ್ನ ಸುಬ್ಬಯ್ಯ ಪಂಚಾಯಿತಿ ವತಿಯಿಂದ ತಾತ್ಕಾಲಿಕ ಪರಿಹಾರ ನೀಡುವ ಭರವಸೆ ನೀಡಿದರು.

ರೆವಿನ್ಯೂ ಇಲಾಖೆಯ ವತಿಯಿಂದ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುದಾಗಿ ತಿಳಿಸಿದರು. ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಗೋಣಿಕೊಪ್ಪ ನಗರದ ಕೀರೆ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಆಗಿಂದಾಗ್ಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಎದುರಾಗಿದೆ.ಮಳೆಯೊಂದಿಗೆ ಗಾಳಿ ಬೀಸುತ್ತಿರುವ ಕಾರಣ ವಿದ್ಯುತ್ ಪೂರೈಕೆಗೆ ಅಡಚಣೆ ಎದುರಾಗಿದೆ.