ಮಡಿಕೇರಿ, ಸೆ. ೧೧: ಕೊಡಗು ಜಿಲ್ಲೆಯಾದ್ಯಂತ ಮತ್ತೆ ವಾತಾವರಣ ದಲ್ಲಿ ಬದಲಾವಣೆಯಾಗಿದ್ದು, ಬಹುತೇಕ ಇಡೀ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ನಿನ್ನೆಯಿಂದ ಮಳೆಯ ರಭಸ ಹೆಚ್ಚಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ. ಪ್ರಸ್ತುತ ಸೆಪ್ಟೆಂಬರ್ ಎರಡನೇ ವಾರದಲ್ಲೂ ಮಳೆ ಹೆಚ್ಚಾಗುತ್ತಿರುವುದರಿಂದ ಜನತೆ ಪರಿತಪಿಸುವಂತಾಗಿದೆ. ಒಂದೆರಡು ದಿನಗಳ ಹಿಂದೆ ಅಲ್ಲಲ್ಲಿ ಧಾರಾಕಾರ ಮಳೆಯಾದರೂ ನಂತರದಲ್ಲೇ ಬಿಸಿಲು ಗೋಚರವಾಗುತ್ತಿತ್ತು. ಆದರೆ ಇದೀಗ ಸಂಪೂರ್ಣವಾಗಿ ಮೋಡ ಕವಿದ ವಾತಾವರಣದೊಂದಿಗೆ ಮಳೆಯ ರಭಸವೂ ಹೆಚ್ಚಾಗಿದೆ.
ಪ್ರಸ್ತುತದ ಸನ್ನಿವೇಶದಲ್ಲಿ ಉಂಟಾ ಗಿರುವ ವಾತಾವರಣದ ಬದಲಾವಣೆ ಯಿಂದಾಗಿ ಜನಜೀವನ ಅಸ್ತವ್ಯಸ್ಥ ಗೊಳ್ಳುವಂತಾಗಿದೆ. ಇನ್ನೂ ಒಂದೆರಡು ದಿನಗಳ ಕಾಲ ಮಳೆ ಮುಂದುವರಿ ಯುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆಯ ಮಾಹಿತಿ ಗಳು ತಿಳಿಸಿವೆ.
(ಮೊದಲ ಪುಟದಿಂದ)
ಕ್ರೀಡಾಕೂಟ ಮುಂದೂಡಿಕೆ
ತೀವ್ರ ಮಳೆಯ ಕಾರಣದಿಂದಾಗಿ ಚೇರಂಬಾಣೆಯಲ್ಲಿ ಅರುಣ ಪ.ಪೂ. ಕಾಲೇಜಿನಲ್ಲಿ ತಾ. ೧೨ ರಂದು (ಇಂದು) ನಡೆಯಬೇಕಿದ್ದ ಮಡಿಕೇರಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವನ್ನು ಮುಂದೂಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಶಾಸಕರ ಪರಿಶೀಲನೆ
ಮಾದಾಪುರದ ಮೂವತ್ತೋಕ್ಲು ಗ್ರಾಮದ ಮಂಡಿರ ಬಿದ್ದಪ್ಪ ಮತ್ತು ಮಂಡಿರ ಪೊನ್ನಪ್ಪ ಅವರ ಮನೆಯ ಹತ್ತಿರ ಮಳೆಯಿಂದ ಬರೆ ಕುಸಿಯುತ್ತಿದ್ದು, ಈ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪರಿಶೀಲಿಸಿ, ಮಾಹಿತಿ ಪಡೆದರು.