ಸಿದ್ದಾಪುರ, ಸೆ. ೧೧: ಹಾಡಹಗಲೇ ಮೇಯಲು ಬಿಟ್ಟಿದ್ದ ಹಸುವೊಂದರ ಮೇಲೆ ಹುಲಿ ದಾಳಿ ನಡೆಸಿ ಕೊಂದ ಘಟನೆ ಮಾಲ್ದಾರೆ ಸಮೀಪದ ಬಾಡಗ-ಬಾಣಂಗಾಲ ಗ್ರಾಮದ ಹುಂಡಿಯ ಮೈಲಾದಪುರದಲ್ಲಿ ನಡೆದಿದೆ.

ಹುಂಡಿ ಮೈಲಾದ ಪುರದ ನಿವಾಸಿ ಪ್ರೇಮಾ ಎಂಬವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದ ಸಂದರ್ಭ ಘಟನೆ ನಡೆದಿದೆ. ಹಸುವನ್ನು ನೋಡಲು ಹೋದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಹಸುವಿನ ಕುತ್ತಿಗೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿದ್ದು, ಹಸುವಿನ ಸಾವಿನಿಂದಾಗಿ ಕರು ಅನಾಥವಾಗಿದೆ.

(ಮೊದಲ ಪುಟದಿಂದ) ಹುಲಿ ದಾಳಿಯಿಂದ ಹಸು ಸಾವನ್ನಪ್ಪಿರುವ ವಿಚಾರ ತಿಳಿದು ಹಸುವಿನ ಮಾಲೀಕರಾದ ಪ್ರೇಮರವರು ಸ್ಥಳಕ್ಕೆ ಬಂದು ಕಣ್ಣೀರು ಇಡುವ ದೃಶ್ಯ ಮನಕಲಕುವಂತಿತ್ತು.

ಈ ಹಿಂದೆ ಕೂಡ ಇವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿತ್ತು. ಇದೀಗ ಎರಡನೇ ಹಸು ಕಳೆದುಕೊಂಡಿರುವ ಇವರು ರೋಧಿಸುತ್ತಿದ್ದರು. ಬಾಡಗ-ಬಾಣಂಗಾಲ ಗ್ರಾಮದಲ್ಲಿ ಕಳೆದ ತಿಂಗಳಿನಲ್ಲಿ ಹುಲಿಯು ಹಾಡಹಗಲೇ ಮಾರ್ಗೋಲ್ಲಿ ಕಾಫಿ ತೋಟದೊಳಗೆ ಹಲವಾರು ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ತಿತಿಮತಿ ಅರಣ್ಯ ಇಲಾಖಾಧಿಕಾರಿಗಳು ಹುಲಿ ಸೆರೆಗೆ ಬೋನ್ ಅಳವಡಿಸಿ ಬೋನ್‌ನಲ್ಲಿ ಹಂದಿಗಳನ್ನು ಇರಿಸಿದ್ದರು. ಅಲ್ಲದೇ ಕೂಬಿಂಗ್ ನಡೆಸಿದರು. ಆದರೆ ಹುಲಿ ಪತ್ತೆ ಆಗಿರಲಿಲ್ಲ. ಆದರೆ ಇದೀಗ ಮತ್ತೆ ಹುಲಿ ಪ್ರತ್ಯಕ್ಷಗೊಂಡು ಹಸುವನ್ನು ಸಾಯಿಸಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಹಸು ಸತ್ತಿರುವ ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.