ಮರಗೋಡು, ಸೆ. ೧೧: ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ವೈಷ್ಣವಿ ಫುಟ್ಬಾಲ್ ಕ್ಲಬ್ ವತಿಯಿಂದ ಮರಗೋಡು ಪ್ರೌಢಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿ ನಡೆಯಿತು. ಮರಗೋಡು, ಕಟ್ಟೆಮಾಡು, ಹೊಸ್ಕೇರಿ, ಅರೆಕಾಡು ಮತ್ತು ಹುಲಿತಾಳ ಗ್ರಾಮಗಳ ೧೦ ಪ್ರಾಂಚೈಸಿ ಮಾಲೀಕರು ೧೨೦ ಆಟಗಾರರನ್ನು ಖರೀದಿಸಿ ಪಂದ್ಯಾವಳಿಯಲ್ಲಿ ಪಾಲ್ಗೊಂಡರು. ಲೀಗ್ ಹಂತದಲ್ಲಿ ಅತ್ಯಧಿಕ ಅಂಕ ಗಳಿಸಿದ ನಾಲ್ಕು ತಂಡಗಳು ನಾಕೌಟ್ ಹಂತ ಪ್ರವೇಶಿಸಿದವು. ಉಪಾಂತ್ಯ ಹೋರಾಟದಲ್ಲಿ ಹೊಸ್ಕೇರಿ ಗ್ರಾಮದ ಅಜ್ಜಿಬಾಣೆ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಅರೆಕಾಡು ಗ್ರಾಮದ ಎಕೋಫ್ರೆಂಡ್ಸ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಕಟ್ಟೆಮಾಡು ಗ್ರಾಮದ ಸನ್ನು ಕಾಫಿ ತಂಡವನ್ನು ಮಣಿಸಿದ ಮರಗೋಡಿನ ಬಿಕೆಎಫ್ಸಿ ತಂಡ ಫೈನಲ್ ಪ್ರವೇಶಿಸಿತು.

ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಎಕೋ ಫ್ರೆಂಡ್ಸ್ ಮತ್ತು ಬಿಕೆಎಫ್ಸಿ ತಂಡಗಳು ಜಡಿ ಮಳೆಯ ಮಧ್ಯೆಯೂ ರೋಚಕ ಹೋರಾಟ ನಡೆಸಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದವು. ಅಂತಿಮವಾಗಿ ಎಕೋ ಫ್ರೆಂಡ್ಸ್ ತಂಡ ೨-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿತು. ಬಿಕೆಎಫ್ಸಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡ ಟ್ರೋಫಿ ಮತ್ತು ೫೦ ಸಾವಿರ ರೂ ನಗದು ಗೆದ್ದರೆ, ರನ್ನರ್ ಅಪ್ ತಂಡ ೩೦ ಸಾವಿರ ರೂ. ನಗದು ಮತ್ತು ಟ್ರೋಫಿ ಮುಡಿಗೇರಿಸಿಕೊಂಡಿತು.

ಎಕೋಫ್ರೆAಡ್ಸ್ ತಂಡದ ನಾಯಕ ಜುನೈದ್ ಅತ್ಯಧಿಕ ಸ್ಕೋರರ್, ಬಿಕೆಎಫ್ಸಿ ತಂಡದ ನಾಯಕ ಚಂದನ್ ಬೆಸ್ಟ್ ಪ್ಲೇಯರ್, ಇದೇ ತಂಡದ ರಮೇಶ್ ಅತ್ಯುತ್ತಮ ಗೋಲಿ, ಎಕೋ ಫ್ರೆಂಡ್ಸ್ ತಂಡದ ಕಟ್ಟೆಮನೆ ಕೃಪಾಲ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಭಾರತಿ ಹೈಸ್ಕೂಲ್ ಸೊಸೈಟಿ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್, ಉಪಾಧ್ಯಕ್ಷ ಸುರೇಶ್ ನಾಯ್ಕ್, ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.