ಪೊನ್ನಂಪೇಟೆ, ಸೆ. ೮: ಪೊನ್ನಂಪೇಟೆಯಲ್ಲಿ ಮಳೆಯ ನಡುವೆಯೂ ವಿಜೃಂಭಣೆಯಿAದ ನಡೆದ ಗೌರಿ-ಗಣೇಶೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು. ಪೊನ್ನಂಪೇಟೆ ವ್ಯಾಪ್ತಿಯ ವಿವಿಧ ೭ ಗೌರಿ ಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪಾಲಂಕೃತ ವಾಹನಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ರಾತ್ರಿ ೧೨ ಗಂಟೆಯ ನಂತರ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಗಣೇಶೋತ್ಸವಕ್ಕೆ ತೆರೆ ಎಳೆಯಲಾಯಿತು.
ಸಂಜೆ ೬ ಗಂಟೆಯಿAದಲೇ ತಮ್ಮ ತಮ್ಮ ಬಡಾವಣೆಯಿಂದ ಡಿಜೆ ಹಾಗೂ ಬ್ಯಾಂಡ್ ಸೆಟ್ ನಾದಕ್ಕೆ ಹೆಜ್ಜೆ ಹಾಕುತ್ತ ಮೆರವಣಿಗೆ ಹೊರಟು ಬಸವೇಶ್ವರ ದೇವಸ್ಥಾನದ ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೌರಿ ಕೆರೆಗೆ ತೆರಳಲಾಯಿತು.
ಗಮನ ಸೆಳೆದ ಶೋಭಾಯಾತ್ರೆ
ಕೃಷ್ಣನಗರದ ಕೃಷ್ಣ ಯುವಕರ ಸಂಘದ ವತಿಯಿಂದ ೩೦ ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶೋಭಾಯಾತ್ರೆಯನ್ನು ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಪ್ರದರ್ಶನಗೊಂಡ ಗಣೇಶನಿಂದ ಶತ ಮಹಿಷಿ ಸಂಹಾರ ಎಂಬ ಧಾರ್ಮಿಕ ಹಿನ್ನೆಲೆಯ ಕಥಾನಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಸಾರ್ವಜನಿಕರಿಗೆ ನಿರಾಸೆ
ಸುಪ್ರೀಂಕೋರ್ಟ್ನ ಆದೇಶದ ಹಿನ್ನೆಲೆ ಡಿಜೆ ಹಾಗೂ ಬ್ಯಾಂಡ್‌ಸೆಟ್ ಅನ್ನು ರಾತ್ರಿ ೧೦ ಗಂಟೆಯ ನಂತರ ನಿಷೇಧಿಸಿದ್ದ ಕಾರಣ, ಯಾವುದೇ ರೀತಿಯ ಮನ ಮರಂಜನೆ ಇಲ್ಲದೆ ನಿರಾಸೆಗೊಂಡ ಪೊನ್ನಂಪೇಟೆ ಪಟ್ಟಣಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ೧೦ ಗಂಟೆ ನಂತರ ಮನೆಕಡೆ ತೆರಳಿದರು. ಆದರೂ ಉತ್ಸಾಹ ಕಳೆದುಕೊಳ್ಳದ ಸಂಘಗಳ ಯುವಕರ ತಂಡ ಖಾಲಿ ನೀರಿನ ಬಾಟಲ್‌ಗಳನ್ನು ಬಡಿದುಕೊಂಡು, ಚಪ್ಪಾಳೆ, ಜಯಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಯಾವುದೇ ರೀತಿಯ ಗಲಭೆಗಳಿಗೆ ಅವಕಾಶವಾಗದ ರೀತಿಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.
ಬಸವೇಶ್ವರ ದೇವಸ್ಥಾನ ಸೇರಿದಂತೆ ಶಿವ ಕಾಲೋನಿಯ ಶಿವ ಯುವಕ ಸಂಘ, ಎಂ.ಜಿ.ನಗರದ ಯುವ ಶಕ್ತಿ ಯುವಕ ಸಂಘ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ಶ್ರೀ ವಿನಾಯಕ ಯುವಕ ಸಂಘಗಳು ವಿದ್ಯುತ್ ದೀಪಾಲಂಕೃತ ರಥಗಳಲ್ಲಿ ಗೌರಿ-ಗಣೇಶ ಮೂರ್ತಿಯನ್ನು ತಮ್ಮ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ಮುಖ್ಯ ರಸ್ತೆಯ ಮೂಲಕ ತೆರಳಿ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ರಾತ್ರಿ ೧೦ ಗಂಟೆಯ ನಂತರ ಡಿಜೆಗೆ ಅವಕಾಶ ಕೊಡದಿದ್ದರೂ, ಬ್ಯಾಂಡ್ ಸೆಟ್‌ಗಾದರೂ ಅವಕಾಶ ನೀಡಿದ್ದರೆ, ಗಣೇಶೋತ್ಸವಕ್ಕೆ ಇನ್ನಷ್ಟು ಕಳೆ ಬರುತ್ತಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದು ಗೋಚರಿಸಿತು.
-ಚನ್ನನಾಯಕ