ಮಡಿಕೇರಿ, ಸೆ. ೪: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಭ್ಯುದಯಕ್ಕಾಗಿ ದುಡಿಯುತ್ತಿರುವ ಸಂಸ್ಥೆ. ಅದರ ಸದಸ್ಯರಾಗುವುದು ಹೆಮ್ಮೆ. ನಾವೆಲ್ಲರೂ ಸದಸ್ಯತ್ವ ಹೊಂದುವ ಮೂಲಕ ಕನ್ನಡ ನಾಡು ಕಟ್ಟುವ ಪರಿಷತ್ತಿಗೆ ಸಹಕರಿಸಬೇಕು ಎಂದು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಚೇತನ್ ನುಡಿದರು. ಅವರು ಗೋಣಿಕೊಪ್ಪಲಿನ ಕಾಮತ್ ನವಮಿ ಸಭಾಂಗಣದಲ್ಲಿ ನಡೆದ ಕಸಾಪದ ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡುವ ಅಭಿಯಾನಕ್ಕೆ ಚಾಲನೆ ನೀಡಿ ಸದಸ್ಯತ್ವ ಪಡೆದುಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ಕಸಾಪ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ ಹೋಬಳಿ ಮಟ್ಟದಿಂದ ಸಮಿತಿಗಳನ್ನು ರಚಿಸಲಾಗುತ್ತಿದೆ. ಸದಸ್ಯತ್ವ ಅಭಿಯಾನ ನಡೆಸಿ ಪರಿಷತ್ತನ್ನು ಸದೃಢವಾದ ಸಂಸ್ಥೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಎಂ.ವಿ. ಗೋವಿಂದರಾಜ್ ಮಾತನಾಡಿ, ಕನ್ನಡ ನಮ್ಮೆಲ್ಲರ ಹೆಮ್ಮೆ. ಕನ್ನಡಿರಾಗಿದ್ದು ಕನ್ನಡ ಉಳಿಸಲು ಎಲ್ಲರೂ ಪಣತೊಡಬೇಕಿದೆ ಎಂದರು. ಪೊನ್ನಂಪೇಟೆ ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಕನ್ನಡ ಬೆಳೆಸುವ ನಿಟ್ಟಿನಲ್ಲಿ ತಮ್ಮ ಎಲ್ಲಾ ಸಹಕಾರ ಇದೆ ಎಂದರು. ಪ್ರಗತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎನ್. ಪ್ರಕಾಶ್ ವಾಣಿಜ್ಯೋದ್ಯ ಮಿಗಳ ಅಂಗಡಿಯ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಗೆ ಆದ್ಯತೆ ಕೊಡಬೇಕು. ನಂತರ ಉಳಿದ ಭಾಷೆಗಳನ್ನು ಉಪಯೋಗಿಸಬೇಕು ಎಂದರು. ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶರತ್ ಕಾಂತ್, ಗೋಣಿಕೊಪ್ಪಲು ಆಟೋ ಚಾಲಕರ ಸಂಘದ ಅಧ್ಯಕ್ಷ ಜಿಮ್ಮಾ ಸುಬ್ಬಯ್ಯ, ಮಾತನಾಡಿದರು. ಪೊನ್ನಂಪೇಟೆ ಕಸಾಪ ಗೌರವ ಕಾರ್ಯದರ್ಶಿ ಶೀಲಾ ಬೋಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೊನ್ನಂಪೇಟೆ ಕಸಾಪ ಕೋಶಾಧಿಕಾರಿ ಪಿ.ಜಿ. ರಾಜಶೇಖರ್, ಸಾಹಿತಿ ವಿನೋದ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಮಂಜುಳಾ, ಧನಲಕ್ಷಿö್ಮ, ಸುಲೇಖಾ, ಉಪಾಧ್ಯಕ್ಷೆ ಸವಿತ, ಕಸಾಪ ಸದಸ್ಯರಾದ ಕೃಷ್ಣ ಚೈತನ್ಯ, ಎಂ.ಎಸ್. ಸುಬ್ರಮಣಿ, ಟಿ.ಕೆ. ಶಂಕರ್, ವಿನ್ಸೆಂಟ್ ಬಾಬು, ಡಾಡು ಜೋಸೆಫ್, ಎನ್. ಇ. ಅಮ್ಜದ್, ಸಂತೋಷ್, ವರಲಕ್ಷಿö್ಮ, ಕಲಾವಿದರಾದ ನಾಣಚಿ ರಮೇಶ್, ಆಟೋ ಚಾಲಕ ಸುರೇಶ್, ಸತೀಶ್ ಉಪಸ್ಥಿತರಿದ್ದರು.