ಮಡಿಕೇರಿ, ಸೆ. ೮: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸರ್ವತೋಮುಖವಾಗಿ ಅಭಿವೃದ್ಧಿ ಪಥದಲ್ಲಿದ್ದು, ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್ ಒಟ್ಟು ರೂ.೨೮.೧೯ ಕೋಟಿ ಲಾಭ ಗಳಿಸಿದ್ದು, ಬ್ಯಾಂಕಿನ ಸದೃಡತೆಯ ಹಿತದೃಷ್ಟಿ ಯಿಂದ ವಿವಿಧ ನಿಧಿಗಳಿಗೆ ರೂ.೧೫.೩೨ ಕೋಟಿ ಕಾಯ್ದಿರಿಸಲಾಗಿ, ರೂ.೧೨.೮೭ ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕು ಪ್ರಾರಂಭವಾದಾಗಿನಿAದ ಇದೇ ಅತೀ ಹೆಚ್ಚಿನ ಲಾಭದ ಮೊತ್ತ ಎಂದು ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೯ ರಂದು (ಇಂದು) ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ತಿಳಿಸಿದ ಅವರು, ಜಿಲ್ಲೆಯ ರೈತರು ಮತ್ತು ಸಾಲಗಾರರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಇತರೆ ಬ್ಯಾಂಕುಗಳಿಗೆ ಸ್ಪರ್ಧಾತ್ಮಕವಾಗಿ ಅನ್ವಯವಾಗುವಂತೆ ಬಡ್ಡಿ ದರವನ್ನು ಪರಿಷ್ಕರಿಸಲಾಗಿದೆ. ಪ್ರಸ್ತುತ ಬ್ಯಾಂಕ್ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಪ್ರಾಮಾಣಿಕ ಸೇವೆಯನ್ನು ನೀಡುತ್ತಿದೆ. ೧೦೧ನೇ ವರ್ಷದ ವಿಕಾಸದ ಹಾದಿಯಲ್ಲಿ ಬ್ಯಾಂಕ್ ಮುನ್ನಡೆಯುತ್ತಿದ್ದು, ಆರ್‌ಬಿಐ, ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿAದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದೆ. ಇಂದು ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕುಗಳ ಪೈಕಿ ಪ್ರಮುಖ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಎಂದು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯಲ್ಲಿನ ವಿವಿಧ ೨೩ ಬ್ಯಾಂಕುಗಳ ಪೈಕಿ ಠೇವಣಾತಿ ಸಂಗ್ರಹಣೆಯಲ್ಲಿ ೩ ನೇ ಸ್ಥಾನ ಹಾಗೂ ಸಾಲ ನೀಡುವಿಕೆಯಲ್ಲಿ ೨ನೇ ಸ್ಥಾನ ಹೊಂದಿದ್ದು, ೩ನೇ ಅತೀ ಹೆಚ್ಚು ಮಾರ್ಕೆಟ್ ಷೇರನ್ನು ಹೊಂದಿರುವ ಬ್ಯಾಂಕು ಜಿಲ್ಲಾ ಸಹಕಾರ ಬ್ಯಾಂಕ್ ಆಗಿದೆ ಎಂದು ವಿವರಿಸಿದರು.

ಜಿಲ್ಲೆಯ ರೈತರಿಗೆ ಕೃಷಿ ನಿರ್ವಹಣೆಗಾಗಿ ಅವಶ್ಯವಿರುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ಬ್ಯಾಂಕಿನಿAದ ನೇರವಾಗಿ ಹಾಗೂ ಜಿಲ್ಲೆಯ ೭೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ನೀಡುತ್ತಿರುವುದಲ್ಲದೆ, ಬ್ಯಾಂಕಿನಿAದ ನೇರವಾಗಿ ಕೃಷಿ ಹಾಗೂ ಕೃಷಿಯೇತರ ವಿವಿಧ ಉದ್ದೇಶಿತ ಸಾಲಗಳನ್ನು

(ಮೊದಲ ಪುಟದಿಂದ) ಜಿಲ್ಲೆಯ ರೈತರ ಮತ್ತು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯಗಳನ್ನು ವಾಣಿಜ್ಯ ಮತ್ತು ಖಾಸಗಿ ಬ್ಯಾಂಕುಗಳಿಗೆ ಸ್ಪರ್ಧಾತ್ಮಕವಾಗಿ ಆಧುನಿಕ ತಂತ್ರಜ್ಞಾನಾಧಾರಿತ ಬ್ಯಾಂಕಿAಗ್ ಸೇವೆಯೊಂದಿಗೆ ನೀಡುವುದು ಬ್ಯಾಂಕ್ ಉದ್ದೇಶವಾಗಿದೆ ಎಂದರು. ಒಟ್ಟು ರೂ. ೨೭.೨೫ ಕೋಟಿ ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಾಗ ರೂ.೦.೮೧ ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿರುತ್ತದೆ. ಒಟ್ಟು ರೂ.೧೦೮.೬೪ ಕೋಟಿ ಮೊತ್ತದ ಸ್ವಂತ ಬಂಡವಾಳ ವನ್ನು ಹೊಂದಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೮.೬೮ ಕೋಟಿಗಳಷ್ಟು ಹೆಚ್ಚಳವಾಗಿದೆ. ೩೧.೦೩.೨೦೨೨ ರ ಅಂತ್ಯಕ್ಕೆ ರೂ.೧೨೭೧.೪೩ ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು. ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೧೮೯.೬೭ ಕೋಟಿ ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿ, ಶೇ.೧೭.೫೪ರ ಪ್ರಗತಿ ಸಾಧಿಸಿದೆ. ೨೦೨೨-೨೩ ನೇ ಸಾಲಿಗೆ ರೂ.೧೪೩೦.೦೦ ಕೋಟಿ ಠೇವಣಾತಿ ಸಂಗ್ರಹಣೆ ಗುರಿ ಹೊಂದಿದೆ ಎಂದು ಬಾಂಡ್ ಗಣಪತಿ ಹೇಳಿದರು.

ಕೃಷಿಕರ ಅಭಿವೃದ್ಧಿ ಪೂರಕ ಚಟುವಟಿಕೆಗಳಿಗೆ ವಿವಿಧ ತರಹದ ಮಧ್ಯಮಾವಧಿ ಕೃಷಿ ಸಾಲಗಳನ್ನು, ಉದ್ದೇಶಿತ ಯೋಜನಾ ವೆಚ್ಚಕ್ಕೆ ಒಳಪಟ್ಟು, ವಾಣಿಜ್ಯ ಬೆಳೆ ಎಕರೆ ಒಂದರ ರೂ.೧.೫೦ ಲಕ್ಷ ಹಾಗೂ ನಾಲೆ ನೀರು ಆಶ್ರಿತ ಎಕರೆ ಒಂದರ ರೂ.೦.೭೫ ಲಕ್ಷದಂತೆ ರಾಜ್ಯ ಸರ್ಕಾರದ ಶೇ.೩ ರ ಬಡ್ಡಿ ರಿಯಾಯಿತಿ ದರದ ಸಾಲ ಯೋಜನೆಗೆ ಒಳಪಟ್ಟು ಸಾಲ ನೀಡಲಾಗುತ್ತಿದೆ. ಅವಧಿಗನುಗುಣವಾಗಿ ಸಾಲ ಮರುಪಾವತಿಸಿದಲ್ಲಿ ಶೇ.೩ ರ ಬಡ್ಡಿ ಪ್ರೋತ್ಸಾಹಧನದೊಂದಿಗೆ ಗರಿಷ್ಠ ರೂ.೨.೫೦ ಲಕ್ಷ ಅನುದಾನ ಸಹಿತ ವಿಶೇಷವಾದ ಸಾಲ ಯೋಜನೆಯನ್ನು ರೂಪಿಸಲಾಗಿದ್ದು, ಈ ಸಂಬAಧ ಬ್ಯಾಂಕು ರೂ.೫೦ ಲಕ್ಷ ಮೊತ್ತವನ್ನು ಕಾಯ್ದಿರಿಸಿಕೊಂಡಿದ್ದು, ಬ್ಯಾಂಕಿನ ಸದಸ್ಯ ಸಹಕಾರ ಸಂಘಗಳು ಅಭಿವೃದ್ಧಿಯ ಚಿಂತನೆಯೊAದಿಗೆ ವಿವಿದ್ಧೋದ್ದೇಶಿತ ಯೋಜನೆಗಳನ್ನು ರೂಪಿಸಿಕೊಂಡು ಸಾಲ ಪಡೆದು ಬ್ಯಾಂಕಿನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸಮೂಹ ಸಾಲ ಯೋಜನೆಯನ್ನು ರೂಪಿಸಿಕೊಂಡಿದ್ದು, ವ್ಯಕ್ತ್ತಿಗತ ರೂ.೬೦ ಲಕ್ಷಕ್ಕೂ ಮೇಲ್ಪಟ್ಟು ದೊಡ್ಡ ಮೊತ್ತದ ಸಾಲದ ಬೇಡಿಕೆ ಇರುವ ಗ್ರಾಹಕರಿಗೂ ಸಾಲ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಕೃಷಿ ಸಾಲಗಳ ವಸೂಲಾತಿ ಪ್ರಮಾಣ ಶೇ.೯೯.೫೪ ರಷ್ಟಿದ್ದು. ಕೃಷಿಯೇತರ ಸಾಲ ವಸೂಲಾತಿಯಲ್ಲಿ ಶೇ.೯೫.೨೯ ರಷ್ಟಿದೆ. ರೆಪೋ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾದಾಗಲೂ ಬ್ಯಾಂಕು ತನ್ನ ವಿವಿಧ ತರಹದ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಮುಖಾಂತರ ಸಾಲಗಾರ ಗ್ರಾಹಕರ ಬಡ್ಡಿ ಹೊರೆಯನ್ನು ಇಳಿಕೆ ಮಾಡಿದ್ದು, ಇದರಿಂದಾಗಿ ಬ್ಯಾಂಕಿಗೆ ಸುಮಾರು ರೂ. ೨ ಕೋಟಿಗಳಷ್ಟು ಆದಾಯದಲ್ಲಿ ಕಡಿಮೆಯಾಗಿರುತ್ತದೆ. ಬ್ಯಾಂಕ್ ವಿತರಿಸಿರುವ ಬಹುಪಾಲು ಸಾಲವು ಠೇವಣಿದಾರರಿಂದ ಸಂಗ್ರಹಿಸಿದ ಬಂಡವಾಳದಿAದ ವಿತರಿಸಲಾದ ಸಾಲವಾಗಿದ್ದು, ಠೇವಣಿದಾರರ ಹಿತಕಾ ಯುವಲ್ಲಿ ಬ್ಯಾಂಕು ಕಟಿಬದ್ಧವಾಗಿದೆ ಎಂದು ತಿಳಿಸಿದರು.

ಮಾದಾಪುರ, ಸಂಪಾಜೆ ಹಾಗೂ ಭಾಗಮಂಡಲದಲ್ಲಿ ಬ್ಯಾಂಕಿನ ಹೊಸ ಶಾಖೆ ತೆರೆಯುವುದು ಸೇರಿದಂತೆ ಇನ್ನಿತರ ವಿಷಯಗಳು ಬ್ಯಾಂಕಿನ ಮುಂದಿನ ಗುರಿಯಾಗಿದೆ ಎಂದರು. ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಕನ್ನಂಡ ಸಂಪತ್, ಕಿಮ್ಮುಡಿರ ಜಗದೀಶ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಎ.ಎಸ್.ಪಾರ್ವತಿ ಉಪಸ್ಥಿತರಿದ್ದರು.