(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಸೆ. ೭: ಸಾಕಾನೆಯೊಂದು ನೀರು ಕುಡಿಯಲು ಕೆರೆಯ ಸಮೀಪ ತೆರಳಿದ್ದ ವೇಳೆ ದಿಢೀರನೆ ಆಗಮಿಸಿದ ಕಾಡಾನೆಯೊಂದು ಸಾಕಾನೆ ಮೇಲೆ ದಾಳಿ ನಡೆಸಿ, ನಂತರ ಸಾಕಾನೆ ತಿರುಗಿ ನಿಂತ ಪರಿಣಾಮ ಆಕ್ರೋಶಗೊಂಡ ಕಾಡಾನೆ ಸಾಕಾನೆಯ ಬಾಲಕ್ಕೆ ಬಾಯಿ ಹಾಕಿ ಘಾಸಿಗೊಳಿಸಿದ ಘಟನೆ ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ನಡೆದಿದೆ.
ಮಾಹಿತಿ ತಿಳಿದ ಸಾಕಾನೆ ಮಾವುತರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವೈದ್ಯರಾದ ರಮೇಶ್ ಸಾಕಾನೆಯ ಬಾಲಕ್ಕೆ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ಮತ್ತಿಗೋಡು ಸಾಕಾನೆ ಶಿಬಿರದ ಸಮೀಪದಲ್ಲಿ ದಟ್ಟಾರಣ್ಯವಿದ್ದು, ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಡಾನೆಗಳು ಓಡಾಟ ನಡೆಸುತ್ತಿರುವುದು ಸಾಮಾನ್ಯವಾಗಿವೆ.
ಶಿಬಿರದಲ್ಲಿರುವ ಸಾಕಾನೆ ಶ್ರೀರಂಗ ಎಂದಿನAತೆ ನೀರು ಕುಡಿಯುವ ಸಲುವಾಗಿ ಸಮೀಪದ ಕೆರೆಯ ಬಳಿ ತೆರಳಿದೆ, ನೀರು ಕುಡಿಯುತ್ತಿದ್ದ ವೇಳೆ ಅರಣ್ಯದಿಂದ ದಿಢೀರನೆ ಆಗಮಿಸಿದ ಕಾಡಾನೆ ಶ್ರೀರಂಗನ ಮೇಲೆ ದಾಳಿ ನಡೆಸಲು ಮುಂದಾಗಿದೆ, ಶ್ರೀರಂಗ ತಿರುಗಿ ನಿಂತು ಪ್ರತಿ ದಾಳಿಗೆ ಮುಂದಾಗಿದೆ. ಈ ವೇಳೆ ಸಿಟ್ಟಾದ ಕಾಡಾನೆ ಶ್ರೀರಂಗನ ಬಾಲಕ್ಕೆ ಕಚ್ಚಿ ಅಲ್ಲಿಂದ ಗಾಭರಿಗೊಂಡು ಅರಣ್ಯ ಸೇರಿದೆ.
ಸಾಕಾನೆಯ ಚೀರಾಟದ ಸದ್ದು ಕೇಳಿದ ಆನೆ ಮಾವುತರು ಕೂಡಲೇ ಆನೆ ಬಳಿ ತೆರಳಿ ತಾತ್ಕಾಲಿಕ ಚಿಕಿತ್ಸೆ ನೀಡಿದರು. ನಂತರ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದ್ದಾರೆ.