ಸೋಮವಾರಪೇಟೆ, ಸೆ. ೬: ಕನ್ನಡ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ, ಕನ್ನಡ ಉಳಿದರೆ ಮಾತ್ರ ಕನ್ನಡಿಗರು ಉಳಿಯುತ್ತಾರೆ. ಈ ನಿಟ್ಟಿನಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರಲ್ಲೂ ಇರಬೇಕು ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ ಹೇಳಿದರು.
ಸಮೀಪದ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾವೇರಿ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಐಗೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ದಿವಂಗತ ಶಾಂತಮಲ್ಲಸ್ವಾಮಿಗಳ ದತ್ತಿ ಕಾರ್ಯಕ್ರಮ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ ಆಗಿ ಮಾರ್ಪಾಡು ಆಗುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಈಗ ೨೪೧೪ ಸದಸ್ಯರಿದ್ದಾರೆ. ಪರಿಷತ್ತನ್ನು ಸದೃಢಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ೫೦ ಸಾವಿರ ಕನ್ನಡಿಗರನ್ನು ಸದಸ್ಯರನ್ನಾಗಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗುರಿ ಹೊಂದಿದೆ. ಇದೇ ಕಾರಣಕ್ಕಾಗಿ ಸದಸ್ಯತ್ವ ಶುಲ್ಕವನ್ನು ಕೂಡ ಇಳಿಸಲಾಗಿದೆ ಎಂದರು.
‘ಕೊಡಗಿನ ವೀರಶೈವ ಅರಸರು’ ವಿಷಯದ ಕುರಿತು ದೈಹಿಕ ಶಿಕ್ಷಣ ಶಿಕ್ಷಕ ಅಜಿತ್‌ಕುಮಾರ್ ಉಪನ್ಯಾಸ ನೀಡಿದರು. ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ರಾಜಪ್ಪ, ಕೊಡಗು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಎ. ಮುರಳೀಧರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ, ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ. ಉಮೇಶ್‌ಕುಮಾರ್ ಮಾತನಾಡಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಕಾರ್ಯದರ್ಶಿ ಎಂ.ಟಿ. ಸರಳಕುಮಾರಿ, ಖಜಾಂಚಿ ಎಸ್.ಎಂ. ಬೆಳ್ಯಪ್ಪ ಮತ್ತು ತಂಡದವರಿಗೆ ಪರಿಷತ್‌ನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಕೆ.ಪಿ. ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.