ಮಡಿಕೇರಿ, ಸೆ.೨: ಐತಿಹಾಸಿಕ ಹಿನ್ನೆಲೆ ಹೊಂದಿರುವ, ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ನವೀಕರಣದ ಹೆಸರಿನಲ್ಲಿ ಕಟ್ಟುಪಾಡುಗಳಿಗೆ ಅಡಚಣೆೆಯಾಗುತ್ತಿದೆ ಎಂದು ಆರೋಪಿಸಿರುವ ದೇವತಕ್ಕ ಪರದಂಡ ಕುಟುಂಬಸ್ಥರು, ಕೆಲವರ ಇಂತಹ ಕ್ರಮವನ್ನು ವಿರೋಧಿಸುವದಾಗಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರದಂಡ ಕೆ.ಸುಬ್ರಮಣಿ; ಅಜ್ಜಂದಿರ ಕಾಲದಿಂದಲೇ ಪರದಂಡ ಕುಟುಂಬಸ್ಥರು ಇಗ್ಗುತಪ್ಪ ದೇವಾಲಯದ ದೇವ ತಕ್ಕರಾಗಿ ದೇವಾಲಯದ ಕಟ್ಟುಪಾಡುಗಳಿಗೆ ಯಾವದೇ ಚ್ಯುತಿ ಬಾರದಂತೆ ನಡೆಸಿಕೊಂಡು ಬರುತ್ತಿದ್ದೇವೆ. ಇದೀಗ ದೇವಾಲಯ ನವೀಕರಣಗೊಂಡು ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಭಕ್ತಜನಸಂಘ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿಯ ಪಾತ್ರ ಸಾಕಷ್ಟಿದೆ. ಆದರೆ ನವೀಕರಣಗೊಂಡ ಬಳಿಕ ಇದೀಗ ಕೆಲವು ಕಟ್ಟುಪಾಡುಗಳನ್ನು ಮಾರ್ಪಾಡು ಮಾಡಲು ಹೊರಟಿರುವದು ಸರಿಯಲ್ಲವೆಂದು ಹೇಳಿದರು.

ಅನಾದಿ ಕಾಲದಿಂದಲೂ ದೇವಸ್ಥಾನದ ವಾಯುವ್ಯ ದಿಕ್ಕಿನಲ್ಲಿರುವ ಕೊಳದಲ್ಲಿ ಕೈ, ಕಾಲು ತೊಳೆದು ಅಶ್ವತ್ಥ ಮರ, ನಾಗನ ಕಟ್ಟೆಗೆ ಪ್ರದಕ್ಷಿಣೆ ಹಾಕಿ ದೇವಸ್ಥಾನಕ್ಕೆ ಒಂದು ಸುತ್ತು ಬಂದು ನಂತರ ದೇವರ ದರ್ಶನ ಪಡೆಯುವದು ವಾಡಿಕೆ. ಆದರೆ, ಇದೀಗ ದೇಗುಲದ ಪೂರ್ವ ದಿಕ್ಕಿನಲ್ಲಿರುವ ಸಣ್ಣ ಮೆಟ್ಟಿಲುಗಳನ್ನು ನವೀಕರಣಗೊಳಿಸಿ ಅಗಲೀಕರಣ ಮಾಡಲಾಗಿದ್ದು, ದ್ವಾರಕ್ಕೆ ಕಮಾನು ಅಳವಡಿಸಿ, ಅದೇ ಮೆಟ್ಟಿಲುಗಳ ಮೂಲಕ ಭಕ್ತರಿಗೆ ಪ್ರವೇಶ ಕಲ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ಮೆಟ್ಟಿಲುಗಳನ್ನು ಅನಾದಿ ಕಾಲದಿಂದಲೂ ಹತ್ತಿ ಬರುವದನ್ನು ನಿಷೇಧಿಸಲಾಗಿದ್ದು, ವಿಶೇಷ ಸಂದರ್ಭಗಳಲ್ಲಿ ಅಂದರೆ ಸತ್ಯ ಪ್ರಮಾಣ ಮಾಡಬೇಕಾದ ಸಂದರ್ಭದಲ್ಲಿ ಸತ್ಯ ಪ್ರಮಾಣ ಮಾಡುವವರು ಮಾತ್ರ ದೇಗುಲದ ೧೩ ತಕ್ಕ ಮುಖ್ಯಸ್ಥರುಗಳ ಸಮ್ಮುಖದಲ್ಲಿ ಮೆಟ್ಟಿಲು ಹತ್ತಲು ಅವಕಾಶವಿರುತ್ತದೆ. ಇದೀಗ ಕೆಲವರು ಇದೇ ಮೆಟ್ಟಿಲನ್ನು ಪ್ರವೇಶ ದ್ವಾರ ಮಾಡಲು ಹೊರಟಿರುವದು ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ಹಿಂದಿನಿAದಲೂ ಜಾರಿಯಲ್ಲಿದ್ದ ನಿಯಮಗಳಿಗೆ, ದೇವರ ಸ್ಥಳ ಮಹಿಮೆಗೆ ಧಕ್ಕೆ ತರುವಂತದ್ದಾಗಿದೆ ಎಂದು ಹೇಳಿದರು.

ಈ ಹಿಂದೆ ಭಕ್ತಜನಸಂಘದ ಮಹಾಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿ

(ಮೊದಲ ಪುಟದಿಂದ) ಮೆಟ್ಟಿಲು ಹತ್ತುವದನ್ನು ನಿಷೇಧಿಸಿ ನಡಾವಳಿಯಲ್ಲೂ ನಮೂದಿಸಲಾಗಿದೆ. ಆದರೂ ಕೂಡ ಕೆಲವರು ಒತ್ತಾಯ ಪೂರ್ವಕವಾಗಿ ಮೆಟ್ಟಿಲು ಹತ್ತುವದಕ್ಕೆ ಪ್ರಯತ್ನ ಪಡುತ್ತಿರುವದು ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಭಕ್ತರು ಕೂಡ ಇಂತಹ ಕಟ್ಟುಪಾಡುಗಳಿಗ ಧಕ್ಕೆ ತರುವಂತಹ ಕಾರ್ಯಗಳಿಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು.

ದೇವಾಲಯದಲ್ಲಿ ನಿತ್ಯ ಪೂಜೆ, ತುಲಾಭಾರ ಸೇವೆಗಳು ನಡೆಯುತ್ತಿದ್ದು, ಬರುವ ಭಕ್ತಾದಿಗಳು ಪೂಜಾ ರಶೀದಿ ಮಾಡಿಸಿ ಪೂಜೆ ಮಾಡಿಸಿಕೊಳ್ಳಬೇಕು. ಇದರಿಂದ ಫಲ ಸಿಗುತ್ತದೆಯಲ್ಲದೆ, ದೇಗುಲಕ್ಕೂ ಆದಾಯ ಬರಲಿದ್ದು, ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಕೋರಿಕೊಂಡರು.

ಭಕ್ತ ಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ ಮಾತನಾಡಿ; ಸಾವಿರ ವರ್ಷಗಳಿಗೂ ಹಿಂದೆ ಕೇರಳದಿಂದ ಬಂದ ಇಗ್ಗುತಪ್ಪ ದೇವರು ಪರದಂಡ ಕುಟುಂಬಸ್ಥರಿಗೆ ದರ್ಶನವಿತ್ತು, ದೇವ ತಕ್ಕರೆಂಬ ಸ್ಥಾನ ನೀಡಿ, ಪೂಜಾ ಸಂದರ್ಭಗಳಲ್ಲಿ ಪ್ರಾರ್ಥನೆ, ನುಡಿಕಟ್ಟಿಗೆ ಅವಕಾಶ ನೀಡಿರುವರು. ಅಂತೆಯೇ ಕಟ್ಟುಪಾಡುಗಳನ್ನು ಪಾಲಿಸುತ್ತಾ ಬರುತ್ತಿದ್ದೇವೆ. ಆದರೆ, ಇದೀಗ ರಾಜಕೀಯವಾಗಿ ಮೆಟ್ಟಿಲುಗಳ ಮೂಲಕ ದೇವಾಲಯ ಪ್ರವೇಶಿಸಲು ಪ್ರಯತ್ನಿಸುತ್ತಿರುವದು ಸರಿಯಾದ ಕ್ರಮವಲ್ಲ. ಈ ಹಿಂದಿನAತೆಯೇ ಯಥಾಸ್ಥಿತಿ ಕಾಪಾಡಬೇಕೆಂದು ಹೇಳಿದರು.

ಪರದಂಡ ವಿಠಲ ಭೀಮಯ್ಯ ಮಾತನಾಡಿ, ದೇವಾಲಯದಲ್ಲಿ ಪ್ರತಿದಿನ ಪರದಂಡ ಕುಟುಂಬಸ್ತರು ಬಂದು ಪ್ರಾರ್ಥನೆ ಸಲ್ಲಿಸಿದ ಬಳಿಕವಷ್ಟೇ ಪೂಜಾ ಕಾರ್ಯಗಳು ಆರಂಭವಾಗುವದು. ಇದೀಗ ಜೀರ್ಣೋದ್ಧಾರಗೊಂಡ ಮೇಲೆ ಸಣ್ಣ ಮೆಟ್ಟಿಲನ್ನು ದೊಡ್ಡದು ಮಾಡಲಾಗಿದೆ. ಈ ಪವಿತ್ರ ಮೆಟ್ಟಿಲ ಮೇಲೆ ಹತ್ತಬಾರದು. ಇಲ್ಲ ಸಲ್ಲದ ಕಾರ್ಯಗಳನ್ನು ಒಪ್ಪಲಾಗದು. ದೇವ ತಕ್ಕರು ಸೇರಿದಂತೆ ೧೩ ತಕ್ಕ ಮುಖ್ಯಸ್ಥ ಕುಟುಂಬಗಳು ಇದನ್ನು ವಿರೋಧಿಸುವದಾಗಿ ಹೇಳಿದರು. ಗೋಷ್ಠಿಯಲ್ಲಿ ಪರದಂಡ ಕುಟುಂಬದ ಪಟ್ಟೆದಾರ ಅಪ್ಪಣ್ಣ, ಮುದ್ದು ಸುಬ್ರಮಣಿ, ಸದಾ ನಾಣಯ್ಯ ಇದ್ದರು.