ಕೊಡಗು ಒಂದು ವಿಶಿಷ್ಟ ಜಿಲ್ಲೆ. ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುವ ಕೊಡಗು ಪ್ರಕೃತಿ ಸೌಂದರ್ಯದ ನಾಡು. ಸಂಸ್ಕೃತಿ ಕಲೆಗಳ ಬೀಡು. ತನ್ನದೇ ಆದ ಕೆಲವು ವಿಶಿಷ್ಟ ಉಡುಗೆ, ತೊಡುಗೆ, ಆಚಾರ, ವಿಚಾರಗಳನ್ನು ಹೊಂದಿ ಪಾಲಿಸುತ್ತಿದೆ. ಕೊಡಗಿನ ಹಬ್ಬಗಳಲ್ಲಿ ಕೈಲ್ ಮುಹೂರ್ತ, ಹುತ್ತರಿ, ಕಾವೇರಿ ಸಂಕ್ರಮಣಗಳೆAಬ ಮೂರು ಹಬ್ಬಗಳು ಪ್ರಮುಖ ಹಬ್ಬಗಳಾಗಿವೆ.

ಕೈಲು ಮುಹೂರ್ತವು ಪ್ರತಿವರ್ಷ ಸೆಪ್ಟೆಂಬರ್ ೩ ರಂದು ಕೊಡಗಿನಾದ್ಯಂತ ಆಚರಿಸುವ ಸಂಭ್ರಮದ ಹಬ್ಬ. ವರ್ಷದ ಮುಂಗಾರು ಮಳೆ ಮುಗಿದು ಬಿತ್ತನೆ, ಕಳೆ ಕೆಲಸ ಮುಗಿದು, ಬೆಳೆ ಕೈಗೆ ಬರುವವರೆಗೆ ಸ್ವಲ್ಪ ವಿಶ್ರಾಂತಿ ಇರುತ್ತದೆ. ಈ ವಿಶ್ರಾಂತಿಯ ಸಮಯವನ್ನು ಕೈಲ್ ಮುಹೂರ್ತದ ಮೂಲಕ ಆಚರಿಸುವರು.

ಕೊಡಗಿನ ಜನ ಶೂರರು. ಯುದ್ಧ ಸಾಮರ್ಥ್ಯದಲ್ಲಿ ಇವರದ್ದು ಎತ್ತಿದ ಕೈ. ಪ್ರತೀ ಕುಟುಂಬದಲ್ಲೂ ಕತ್ತಿ, ಕೋವಿಗಳಿರುತ್ತದೆ. ಜನನ-ಮರಣ ಸಮಯದಲ್ಲಿಯೂ ಕೋವಿಯಿಂದ ಗುಂಡು ಹಾರಿಸಿ ಸಂಭ್ರಮವನ್ನು, ಆತ್ಮಶಾಂತಿಯನ್ನು ಕೋರುವ ಸಂಪ್ರದಾಯವಿದೆ.

ಕೈಲ್ ಮುಹೂರ್ತ ಹಬ್ಬದಂದು ಕತ್ತಿ, ಕೋವಿ ಇತರ ಆಯುಧಗಳನ್ನು ತೊಳೆದು, ಗಂಧ, ಪುಷ್ಪಗಳಿಂದ ಅಲಂಕಾರ ಮಾಡಿ ಆಯುಧ ಪೂಜೆಯನ್ನು ಮನೆಯವರೆಲ್ಲಾ ಸೇರಿ ಮಾಡುತ್ತಾರೆ. ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಈ ದಿನ ಅರೆಬೆಂದ ಬಿದಿರು ಮೆಳೆಗಳನ್ನು ನೆಡುವುದುಂಟು. ಭತ್ತದ ಪೈರು ಬಿದಿರು ಮೆಳೆಯಂತೆ ಹುಲುಸಾಗಿ ಬೆಳೆಯಲೆಂದೂ ಮತ್ತು ಭತ್ತದ ಪೈರಿಗೆ ದೃಷ್ಟಿ ತಾಕದಿರಲೆಂದೂ ಈ ರೀತಿ ಮಾಡುವರು. ಕೊಡವರ ಇಷ್ಟ ದೇವಯಾ ಆರಾಧನಾ ಕೇಂದ್ರಕ್ಕೆ ‘ನೆಲ್ಲಕ್ಕಿ ಬಾಡೆ’ ಎಂದು ಹೆಸರು. ಅಲ್ಲಿ ಆಯುಧಗಳ ಸ್ವೀಕಾರ, ಸಾಮೂಹಿಕ ಜಾನಪದ ನೃತ್ಯ, ಗಾಯನ, ಕುಣಿತ, ಉತ್ಸವಗಳನ್ನು ಆಚರಿಸುತ್ತಾರೆ. ಜೊತೆಗೆ ಸಂತೋಷ ಸಂಭ್ರಮದ ಸಲುವಾಗಿ ವಿವಿಧ ಭಕ್ಷö್ಯಗಳನ್ನು ತಯಾರಿಸುತ್ತಾರೆ. ಮನೆಮಂದಿಯೆಲ್ಲಾ ಒಟ್ಟುಸೇರಿ ಈ ಸಂಭ್ರಮಾಚರಣೆಯನ್ನು ಮಾಡುತ್ತಾರೆ.

ಕೈಲು ಮುಹೂರ್ತ ದಿನ ಆಯುಧಗಳ ಪೂಜೆ, ಇತರ ಸಂಭ್ರಮಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ಮುಖ್ಯವಾಗಿ ಕ್ರೀಡಾ ಸಂಭ್ರಮಕ್ಕೂ ಬಹು ಆದ್ಯತೆ ನೀಡುತ್ತಾರೆ.

ಕ್ರೀಡಾ ವಿಶೇಷ ಸಂಭ್ರಮ: ಕೈಲು ಮುಹೂರ್ತದಂದು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ತುಂಬಾ ರೋಚಕವಾಗಿ ಸಾಗುತ್ತದೆ. ಇದು ಶೌರ್ಯದ ಸಂಕೇತ ಮತ್ತು ತಮ್ಮ ಗುರಿ ಕೌಶಲ್ಯಗಳ ಪ್ರದರ್ಶನವೂ ಆಗಿದ್ದು, ಸ್ಪರ್ಧಾ ರೂಪದಲ್ಲಿರುತ್ತದೆ. ಈ ಸ್ಪರ್ಧೆಯು ಬೇರೆ ಬೇರೆ ವಿಭಾಗಗಳಲ್ಲಿ ಮಹಿಳೆಯರಿಗೆ, ಪುರುಷರಿಗೆ ನಡೆಯುತ್ತದೆ. ಎತ್ತರದ ಮರಗಳ ಮೇಲೆ ತೆಂಗಿನ ಕಾಯಿಗಳನ್ನು ಇಟ್ಟು ನಿಗದಿತ ದೂರದಿಂದ ಕಾಯಿಗಳಿಗೆ ಗುಂಡು ಹೊಡೆಯಲಾಗುತ್ತದೆ. ಇಲ್ಲೂ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಸ್ಪರ್ಧೆಗೆ ಇಟ್ಟಿರುತ್ತಾರೆ.

ತೆಂಗಿನ ಕಾಯಿ ಕಸಿಯುವ ಸ್ಪರ್ಧೆ: ಇದಂತೂ ತುಂಬಾ ಜಿದ್ದಾಜಿದ್ದಿನ ಸ್ಪರ್ಧೆಯಾಗಿ ಮನೋರಂಜನಾ ಆಟವಾಗಿ ನೋಡುಗರನ್ನು ರಂಜಿಸುತ್ತದೆ. ಇಲ್ಲಿ ಕೂಡ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆಯನ್ನು ಸಂಘಟಿಸುತ್ತಾರೆ. ಹೆಚ್ಚಾಗಿ ಮಧ್ಯಾಹ್ನದ ನಂತರ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಆಟೋಟಗಳ ಸ್ಪರ್ಧೆಗಳೂ ನಡೆಯುತ್ತದೆ. ಓಟಗಳಲ್ಲಿ ನೂರು ಮೀಟರ್‌ನಿಂದ ಆರಂಭವಾಗಿ ಬೇರೆ ಬೇರೆ ಸ್ಪರ್ಧೆಗಳು ನಡೆಯುತ್ತವೆ. ಜಿಗಿತ, ಎಸೆತದ ಸ್ಪರ್ಧೆಗಳು, ದೂರದ ಗುಡ್ಡಗಾಡು, ರಸ್ತೆ ಓಟಗಳೂ ನಡೆಯುತ್ತವೆ. ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ ಮುಂತಾದ ಕ್ರೀಡಾ ಸ್ಪರ್ಧೆಗಳು ನಡೆದು ಹಬ್ಬ, ದೇವರ ಪೂಜೆ, ಆಯುಧಗಳ ಪೂಜೆ ಜೊತೆಗೆ ನೃತ್ಯ, ಹಾಡು ಮಾತ್ರವಲ್ಲದೇ ಈ ಕೈಲು ಮುಹೂರ್ತ ಹಬ್ಬದಲ್ಲಿ ಕ್ರೀಡೆಗಳಿಗೂ ಮಹತ್ವ ನೀಡುವುದೊಂದು ವಿಶೇಷ.

ಈ ಹಬ್ಬವನ್ನು ಕೊಡಗಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುವುದು. ಹೊಲ-ಗದ್ದೆಗಳ, ಭತ್ತ-ಬೆಳೆಗಳ ಮಹತ್ವ, ಶ್ರಮ-ಸಂಭ್ರಮ, ವಿಶ್ರಾಂತಿ ಆಚರಣೆಗಳ ಸಂಕೇತ ಈ ಹಬ್ಬ. ಕೈಲ್ ಮುಹೂರ್ತ ಹಬ್ಬ ಎಲ್ಲರಿಗೂ ಸಂಪನ್ನತೆಯನ್ನು ತರಲಿ, ಭತ್ತದ ಬೆಳೆ ಬಂಗಾರವಾಗಲಿ, ನೆಮ್ಮದಿ - ಹರುಷ ಎಲ್ಲರದಾಗಲಿ.

- ಹರೀಶ್ ಸರಳಾಯ, ಮಡಿಕೇರಿ.