ಸುಂಟಿಕೊಪ್ಪ, ಆ. 30: ರೋಮನ್ ಕ್ಯಾಥೋಲಿಕ್ ಸಮುದಾಯದ ಯುವ ಜನಾಂಗಕ್ಕೆ ಸ್ಪರ್ಧಾತ್ಪಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಮುಂದಾಗಬೇಕೆಂದು ಜಿಲ್ಲಾ ದಿವ್ಯಜೋತಿ ಪತ್ತಿನ ಸಹಕಾರಿ ಸಂಘದ ಬ್ಯಾಂಕಿನ ಅಧ್ಯಕ್ಷ ಸಿರಿಲ್ ಮೋರಾಸ್ ಅವರು ಕರೆ ನೀಡಿದರು.

ಇತ್ತೀಚೆಗೆ ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಮುದಾಯದ ವತಿಯಿಂದ ಆಯೋಜಿಸಲಾದ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಕೂಡ ನಮ್ಮ ಯುವ ಜನಾಂಗ ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ನಾವು ಸಾಧಕರಾಗಿ ಹೊರಹೊಮ್ಮಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಸಂಘದ ಉದ್ದೇಶ ಮತ್ತು ಇಲ್ಲಿಯವರೆಗೆ ನಡೆದ ಕಾರ್ಯಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದ ಸಿರಲ್ ಮೋರಾಸ್ ಧರ್ಮ ರಕ್ಷಣೆ, ಸಮಾಜ ಸೇವೆಯೊಂದಿಗೆ ನಾವು ಕೂಡ ಸಮಾಜದಲ್ಲಿ ಗುರುತಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಚಾಲಕ ಫಿಲಿಪ್‍ವಾಸ್ ವೇದಿಕೆಯ ಹುಟ್ಟು, ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ ಅಧ್ಯಕ್ಷರುಗಳ ಬಗ್ಗೆ ಮಾಹಿತಿ ನೀಡಿದರು.

ನಮ್ಮ ಸಂಘ 13 ವರ್ಷಗಳಿಂದ ಕೊಡಗು ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿದೆ. ಈ ಕ್ರೀಡಾಕೂಟಗಳು ಸಾಕಷ್ಟು ಯಶಸ್ವಿಯಾಗಿ ನಡೆದು ಬಂದು ಸಮುದಾಯದ ಏಕತೆಗೆ ಪೂರಕವಾಗಿದೆ ಎಂದರು.

ಸಂಘದ ಸ್ಥಾಪಕ ಅಧ್ಯಕ್ಷ ವಿ.ಎ. ಲಾರೆನ್ಸ್ ಅವರು ಮಾತನಾಡಿ, ಕೆಲವು ಸಂದರ್ಭಗಳಲ್ಲಿ ನಮ್ಮ ವೇದಿಕೆಗೆ ಸಹಾಯ ಮತ್ತು ನೆರವು ಎಂಬುದು ಕೇವಲ ಆಶ್ವಾಸನೆಗಳಲ್ಲಿ ಉಳಿದಿದ್ದು, ಯುವಜನಾಂಗ ತಮ್ಮ ಕರ್ತವ್ಯಗಳನ್ನು ಮಾಡುವುದರೊಂದಿಗೆ ಹಕ್ಕುಗಳನ್ನು ಪಡೆಯಬೇಕು. ಅವರಲ್ಲಿ ಧರ್ಮದ ಜವಾಬ್ದಾರಿಯನ್ನು ಕೂಡ ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಅವರು ಮಾತನಾಡಿ, ರೋಮನ್ ಕ್ಯಾಥೋಲಿಕ್ ಸಂಘವನ್ನು ಜಿಲ್ಲೆಯಾದ್ಯಂತ ಸಂಘಟಿಸುವ ನಿಟ್ಟಿನಲ್ಲಿ ಮೊದಲು ಮಡಿಕೇರಿ ತಾಲೂಕಿನಲ್ಲಿ ವ್ಯವಸ್ಥಿತವಾಗಿ ಸಂಘಟನೆ ಮಾಡುವ ಮೂಲಕ ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಗಳಲ್ಲಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ಯುವಜನಾಂಗದ ಮುಂದಾಳುಗಳು ತೆಗೆದುಕೊಳ್ಳ ಬೇಕೆಂದು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಜೋಕಿಂವಾಸ್, ಜಾನ್ಸನ್ ಪಿಂಟೋ, ಮರ್ವಿನ್‍ಲೋಬೋ, ಮಾಜಿ ಅಧ್ಯಕ್ಷ ಜಯರಾಜ್, ಕಾರ್ಯದರ್ಶಿ ಪಿ.ಎಫ್.ಸಬಾಸ್ಟೀನ್, ವಿನ್ಸೆಂಟ್ ಡಿಸೋಜ (ವಿನ್ಸಿ), ಪೀಟರ್, ಬಿಜು, ವಿನ್ಸೆಂಟ್ ಪಿಂಟೋ, ಸಿಲ್ವೆಸ್ಟರ್ ಡಿಸೋಜ ಮತ್ತಿತರರು ಇದ್ದರು.