ಕೂಡಿಗೆ, ಆ. 30: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ಸ್ಥಳದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರೂ. 87 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಹಂತದ ಕಾಮಗಾರಿಗೆ ಭೂಮಿ ಪೂಜೆಯನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ (ಕೇಶವ) ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕುಶಾಲನಗರ ಪಟ್ಟಣ ಪಂಚಾಯತಿ ಕಸ ವಿಲೇವಾರಿ ಘಟಕದಲ್ಲಿ ಘನತ್ಯಾಜ್ಯ ಸ್ಥಳದಲ್ಲಿ ಚರಂಡಿ ನಿರ್ಮಾಣ, ‘ಡ್ರೈವೇಸ್ಟ್ ಕಲೆಕ್ಷನ್ ಸೆಂಟರ್’ ನಿರ್ಮಾಣ, ಗ್ರಾವೆಲ್ ಫಿಲ್ಟರ್ ನಿರ್ಮಾಣ, ಪ್ರೊಸೆಸಿಂಗ್ ಶೆಡ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದಾದ ನಂತರ ವೈಜ್ಞಾನಿಕ ತಂತ್ರಜ್ಞಾನದ ಕಸ ವಿಲೇವಾರಿ ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯಾಭಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯಾಧಿಕಾರಿ ಉದಯಕುಮಾರ್ ಸೇರಿದಂತೆ ಗುತ್ತಿಗೆದಾರ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.