ಮಡಿಕೇರಿ, ಆ: 30: ಗ್ರಾಹಕರ ವೇದಿಕೆಯ ಮೂಲಕ ಆಯೋಗ ನೀಡಿದ್ದ ತೀರ್ಪನ್ನು ಪಾಲಿಸದೆ ಇರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಸಂಬಂಧಿತ ಅಧಿಕಾರಿಗಳಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿರುವ ಪ್ರಕರಣವೊಂದು ವರದಿಯಾಗಿದೆ. ಇದೊಂದು ಕುತೂಹಲಕಾರಿ ಘಟನೆಯಾಗಿದ್ದು 16 ವರ್ಷಗಳ ಕಾಲ ಈ ವಿವಾದ ನಡೆದಿದ್ದು ಇದೀಗ ಈ ವಾರೆಂಟ್ ಜಾರಿಯಾಗಿರುವದು ವಿಶೇಷವಾಗಿದೆ.
ಪ್ರಕರಣವೇನು?: ಮಡಿಕೇರಿಯ ನಿವಾಸಿಯಾದ ಎಂ.ಎಚ್. ನೂರುದ್ದೀನ್ ಎಂಬವರು 15-02-2007ರಲ್ಲಿ ಅಬಕಾರಿ ಇಲಾಖೆಯ ಬಹಿರಂಗ ಹರಾಜಿನಲ್ಲಿ ಅವರ ಪ್ರಕಟಣೆಯಂತೆ ಏಂ 12 ಒ 3717 ನೋಂದಣಿ ಸಂಖ್ಯೆಯ ವಾಹನವನ್ನು ಹೆಚ್ಚಿನ ಬಿಡ್ ಮೂಲಕ (69,750) ಹೊಂದಿಕೊಂಡಿದ್ದರು. ಈ ವಾಹನವನ್ನು ಅವರು ತಮ್ಮ ಹೆಸರಿಗೆ ದಾಖಲೆ ವರ್ಗಾಯಿಸಲು ಅಬಕಾರಿ ಇಲಾಖೆಯಿಂದ ದಾಖಲೆ ಪತ್ರ ಪಡೆಯುವಾಗ ಈ ವಾಹನದ ನೋಂದಣಿ ಸಂಖ್ಯೆ ಏಂ 22 ಒ 3717 ಎಂಬದು ಅರಿವಾಗಿತ್ತು. ಈ ಬಗ್ಗೆ ಜಿಲ್ಲಾ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದಾಗ ವಾಹನದ ವರ್ಗಾವಣೆಗಾಗಿ ರೂ 6,820 ನ್ನು ರಸ್ತೆ ತೆರಿಗೆ ಎಂದು ಪಡೆಯಲಾಗಿತ್ತು.
ವಾಹನವು ಏಂ 12 ಆಗಿರಲಿ, ಏಂ 22 ಆಗಿರಲಿ ರಸ್ತೆ ತೆರಿಗೆ ಕಟ್ಟುವಂತಿಲ್ಲ. ಆದರೂ ನಕಲಿ ನಂಬರ್ ಎಂದು ರಸ್ತೆ ತೆರಿಗೆ ಕಟ್ಟಲೇಬೇಕೆಂದು ಸಾರಿಗೆ ಇಲಾಖೆಯವರು ಒತ್ತಾಯಿಸಿದ್ದರಿಂದ ನೂರುದ್ದೀನ್ ರೂ. 6,820 ರಸ್ತೆ ತೆರಿಗೆ ಕಟ್ಟಿದ್ದರು. ರಸ್ತೆ ತೆರಿಗೆ ಕಟ್ಟಿದರೂ ವಾಹನವನ್ನು ಅವರ ಹೆಸರಿಗೆ ವರ್ಗಾಯಿಸದೇ ಇರುವುದನ್ನು ಪ್ರಶ್ನಿಸಿದಾಗ ಹೊಸ ವಾಹನದ ಬೆಲೆಯ ಆಧಾರದಂತೆ ರಸ್ತೆ ತೆರಿಗೆ ಕಟ್ಟಿದರೆ ಮಾತ್ರ ವಾಹನವನ್ನು ವರ್ಗಾಯಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿತ್ತು. ಇದರ ವಿರುದ್ಧ ದಿನಾಂಕ 24.03.2010 ರಂದು ಕೊಡಗು ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಮುಂದೆ ಅಬಕಾರಿ ಆಯುಕ್ತರು ಹಾಗೂ ಸಾರಿಗೆ ಆಯುಕ್ತರ ವಿರುದ್ಧ ವಕೀಲರಾದ ಸುಮಂತ್ ಪಾಲಾಕ್ಷ ಅವರ ಮೂಲಕ ಆದ ನಷ್ಟವನ್ನು
(ಮೊದಲ ಪುಟದಿಂದ) ಭರಿಸುವಂತೆ ಕೋರಿ ಅವರು ದೂರು ದಾಖಲಿಸಿದ್ದರು. ವಾದಿ ಪ್ರತಿವಾದಿಗಳ ವಿಚಾರಣೆ ನಡೆದು, ವೇದಿಕೆಯು 31.08.2010 ರಂದು 1ನೇ ಪ್ರತಿವಾದಿಯಾದ ಅಬಕಾರಿ ಆಯುಕ್ತರು ವಾಹನವನ್ನು ವಾಪಾಸು ಪಡೆದು ರೂ. 90,824 ಶೇ. 10 ರಂತೆ ಬಡ್ಡಿ ಸೇರಿಸಿ ಕೋಡುವಂತೆಯೂ, ರೂ 5,000ಗಳ ಪರಿಹಾರ ಹಾಗೂ ರೂ. 500 ದಾವಾ ವೆಚ್ಚವನ್ನು 1ನೇ ಮತ್ತು 2ನೇ ಪ್ರತಿವಾದಿಗಳು 60 ದಿನಗಳಲ್ಲಿ ನೀಡುವಂತೆ ತೀರ್ಪು ನೀಡಿ ಸದ್ರಿ ಪ್ರಕರಣವನ್ನು ಇತ್ಯರ್ಥ ಮಾಡಿತ್ತು. ಆದರೆ ವೇದಿಕೆ ತೀರ್ಪನ್ನು ಪ್ರಶ್ನಿಸಿ, ಪ್ರತಿವಾದಿಗಳು ಕರ್ನಾಟಕ ಗ್ರಾಹಕ ಆಯೋಗದ ಮುಂದೆ ಮೇಲ್ಮನವಿ ಸಲ್ಲಿಸಿದ್ದು, ಆಯೋಗವು ಪುನರ್ ಪರಿಶೀಲಿಸುವಂತೆ ಕೊಡಗು ಜಿಲ್ಲಾ ಗ್ರಾಹಕರ ವೇದಿಕೆಗೆ ಆದೇಶ ನೀಡಿತ್ತು.
ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಸದ್ರಿ ಪ್ರಕರಣದ ಸಂಬಂಧ ಮರು ವಿಚಾರಣೆ ನಡೆದು, ದಿನಾಂಕ 20.07.2013 ರಂದು 90,824 ರೂಪಾಯಿಗಳೊಂದಿಗೆ 10,000 ರೂಪಾಯಿಗಳ ಪರಿಹಾರ, 5000 ರೂಪಾಯಿ ವೆಚ್ಚ ಹಾಗೂ ಶೇ. 8 ರಂತೆ ಬಡ್ಡಿಯನ್ನು ವಾಹನ ಪಡೆದ ದಿನಾಂಕದಿಂದ ಹಣ ನೀಡುವವರೆಗೆ ಕೊಡುವಂತೆ ಪ್ರತಿವಾದಿಗಳಿಗೆ ಆದೇಶವಾಗಿರುತ್ತದೆ. ಈ ಆದೇಶವನ್ನು ಮತ್ತೆ ಪ್ರಶ್ನಿಸಿ ಪ್ರತಿವಾದಿಗಳು ಕರ್ನಾಟಕ ಗ್ರಾಹಕರ ಆಯೋಗದ ಮುಂದೆ 17.02.2014 ರಂತೆ ಇನ್ನೊಮ್ಮೆ ಮೇಲ್ಮನವಿ ಸಲ್ಲಿಸಿದ್ದರು. ಆಯೋಗವು ವಿಚಾರಣೆ ನಡೆಸಿ 10.03.2022 ರಂದು ಎಂಟು ವರ್ಷಗಳ ನಂತರ ಜಿಲ್ಲಾ ಗ್ರಾಹಕರ ವೇದಿಕೆಯ ತೀರ್ಪನ್ನು ಎತ್ತಿ ಹಿಡಿದು ಪ್ರತಿವಾದಿಗಳ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಇದಾದ ನಂತರ ನೂರುದ್ದೀನ್ ರಾಜ್ಯ ಗ್ರಾಹಕ ಆಯೋಗದ ಆದೇಶವನ್ನು ಪಾಲಿಸುವಂತೆ ಜಿಲ್ಲಾ ಗ್ರಾಹಕರ ವೇದಿಕೆಯ ಮುಂದೆ ಅಮಲ್ಜಾರಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಆಯೋಗದ ಆದೇಶವನ್ನು ಪಾಲಿಸದೇ ಇದ್ದ ಕಾರಣ ಪ್ರತಿವಾದಿಗಳಿಗೆ ತಾ. 23.08.22 ರಂದು ಅರೆಸ್ಟ್ ವಾರೆಂಟ್ ಜಾರಿಯಾಗಿದೆ.