ಕುಶಾಲನಗರ, ಆ. 30: ಗಣೇಶ ಹಬ್ಬದ ಸಡಗರದ ನಡುವೆ ಕುಶಾಲನಗರದಲ್ಲಿ ಬ್ಯಾಂಕ್ ಗ್ರಾಹಕರೊಬ್ಬರಿಗೆ ಭಾರೀ ಮೊತ್ತದ ಹಣ ವಂಚನೆಯಾದ ಘಟನೆ ಸಂಭವಿಸಿದೆ.
ಮಡಿಕೇರಿಯ ಕಾಲೇಜೊಂದರ ಪ್ರಾಂಶುಪಾಲರು 25 ಸಾವಿರ ರೂ. ತನ್ನ ಬ್ಯಾಂಕ್ ಖಾತೆಯಿಂದ ಕಳೆದುಕೊಂಡಿದ್ದಾರೆ. ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಮಡಿಕೇರಿ ಬಾಲಕಿಯರ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ ಜವರಪ್ಪ ಕುಶಾಲನಗರದ ಮುಳ್ಳುಸೋಗೆಯಲ್ಲಿರುವ ಎಸ್‍ಬಿಐ ಎಟಿಎಂನಲ್ಲಿ ಸೋಮವಾರ 5 ಸಾವಿರ ರೂ. ಡ್ರಾ ಮಾಡಲು ಹೋಗಿದ್ದಾರೆ. ಈ ವೇಳೆ ಪಾಸ್‍ವರ್ಡ್ ನಮೂದಿಸಿ ಇನ್ನೇನು ಹಣ ಕೈಗೆ ಬರಬೇಕು ಎನ್ನುವಾಗ ವಿದ್ಯುತ್ ಸಮಸ್ಯೆಯಿಂದ ಎಟಿಎಂ ಆಫ್ ಆಗಿದೆ. ಇವರ ಖಾತೆಯಿಂದ 5 ಸಾವಿರ ರೂ. ಕಡಿತಗೊಂಡಿದೆ. ಕೂಡಲೇ ಜವರಪ್ಪ ಎಸ್‍ಬಿಐ ಮಡಿಕೇರಿ ಮುಖ್ಯ ಶಾಖೆಗೆ ದೂರು ಸಲ್ಲಿಸಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ವ್ಯಕ್ತಿಯೊಬ್ಬ ಜವರಪ್ಪ ಅವರಿಗೆ ಕರೆ ಮಾಡಿ ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಬ್ಯಾಂಕ್‍ಗೆ ದೂರು ನೀಡಿರುವ ವಿಷಯವನ್ನು ಪ್ರಸ್ತಾಪಿಸಿ ನಂತರ ಫೆÇೀನ್‍ಗೆ ಬಂದಿರುವ ಒಟಿಪಿ ಕೇಳಿದ್ದಾನೆ. ಒಟಿಪಿ ಕೊಟ್ಟರೆ 5 ಸಾವಿರ ರೂ. ಖಾತೆಗೆ ಮರಳಿಸುವುದಾಗಿ ತಿಳಿಸಿದ್ದಾನೆ. ಇದನ್ನು ನಂಬಿದ ಜವರಪ್ಪ ಫೆÇೀನ್ ಮಾಡಿದಾತನಿಗೆ ಒಟಿಪಿ ನೀಡಿದ್ದಾರೆ. ಕೂಡಲೇ ಇವರ ಖಾತೆಯಿಂದ ತಲಾ 10 ಸಾವಿರದಂತೆ ಒಟ್ಟು 20 ಸಾವಿರ ಕಡಿತವಾಗಿದೆ. ಮೋಸದ ಅರಿವಾಗುತ್ತಿದ್ದಂತೆಯೇ ಜವರಪ್ಪ ಅವರು ಮಡಿಕೇರಿ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಈ ರೀತಿಯಲ್ಲಿ ಯಾರಿಗೂ ವಂಚನೆ ಆಗಬಾರದು, ಗ್ರಾಹಕರು ಜಾಗ್ರತೆ ವಹಿಸಬೇಕು. ನಾನು ಬ್ಯಾಂಕ್‍ಗೆ ನೀಡಿದ ದೂರು ವಂಚಕರಿಗೆ ಹೇಗೆ ಗೊತ್ತಾಯಿತು ಎನ್ನುವ ಪ್ರಶ್ನೆಗೆ ಉತ್ತರ ನಿಗೂಢವಾಗಿದೆ. ಬ್ಯಾಂಕ್ ಸಿಬ್ಬಂದಿ ಮೇಲೆ ನನಗೆ ಅನುಮಾನವಿದೆ ಅನ್ನುತ್ತಾರೆ ಪ್ರಾಂಶುಪಾಲ ಜವರಪ್ಪ. ಇಂಥ ಘಟನೆಗಳಿಂದ ಬ್ಯಾಂಕ್ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಬಗ್ಗೆ ಕುಶಾಲನಗರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಗರ ಶಾಖೆಯ ಅಧಿಕಾರಿ ಸಚಿತ್ ಅಯ್ಯಣ್ಣ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಯಾವುದೇ ಕಾರಣಕ್ಕೂ ಗ್ರಾಹಕ ಓಟಿಪಿ ಸಂಖ್ಯೆ ನೀಡಬಾರದು. ಈ ಮೂಲಕ ವಂಚನೆ ಆಗುತ್ತಿದೆ. ಎಟಿಎಂ ಕೇಂದ್ರದಲ್ಲಿ ಡ್ರಾ ಮಾಡಿದ ಮೊತ್ತ ರೂ. 5000 ಗ್ರಾಹಕನಿಗೆ ಸಿಗದಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಆ ಬಗ್ಗೆ ಗುರುವಾರ ಬ್ಯಾಂಕ್‍ನಲ್ಲಿ ಸ್ಟೇಟಸ್ ಚೆಕ್ ಮಾಡಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. -ಚಂದ್ರಮೋಹನ್