ಸೋಮವಾರಪೇಟೆ,ಆ.30: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಲವು ದೈವಿಕ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು.
ಈ ಹಿಂದೆ ‘ಭೀಕರ ಬರಗಾಲ ಎದುರಾದ ಸಂದರ್ಭ ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದರು’ ಎಂಬ ದೈವಿಕ ಇತಿಹಾಸ ಹೊಂದಿರುವ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ
(ಮೊದಲ ಪುಟದಿಂದ) ಇಂದು ನೂರಾರು ಮಂದಿ ಭಕ್ತಾದಿಗಳು, ನವ ವಿವಾಹಿತ ದಂಪತಿಗಳು ಬಾಗಿನ ಅರ್ಪಿಸಿ ದೇವಿಯನ್ನು ಪ್ರಾರ್ಥಿಸಿದರು.
ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಹಾಗೂ ಭಕ್ತಾದಿಗಳು ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸಿದರು. ಸಮಿತಿಯ ವತಿಯಿಂದ ಜಾತ್ರೋತ್ಸವ ಆಯೋಜಿಸಿ, ಸಹಸ್ರಾರು ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಸ್ವರ್ಣಗೌರಿ ಹಬ್ಬದ ದಿನವಾದ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿನ(ಮೊರದಲ್ಲಿ ಅರಸಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಳೆ, ಹೂವು, ಫಲತಾಂಬೂಲ)ವನ್ನು ದೇವಾಲಯದ ಪಕ್ಕದಲ್ಲಿರುವ ಬಂಗಾರದ ಕಲ್ಲಿನ ಕಟ್ಟೆಯ ಮೇಲಿಟ್ಟು ಪೂಜೆ ಸಲ್ಲಿಸಿ, ಗ್ರಾಮದ ಪಟೇಲರ ಮನೆಯವರು ಹಾಗೂ ಬಸವೇಶ್ವರ-ಸ್ವರ್ಣಗೌರಿ ಹೊನ್ನಮ್ಮ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ಕೆರೆಗೆ ಅರ್ಪಿಸಿದರು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜೀ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಸೇರಿದಂತೆ ಇನ್ನಿತರ ಪ್ರಮುಖರು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದಾದ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಬಾಗಿನ ಅರ್ಪಿಸಲು ಅವಕಾಶ ಕಲ್ಪಿಸಲಾಯಿತು. ಕೊಡಗು ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ನವ ವಿವಾಹಿತ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊನ್ನಮ್ಮ ದೇವಿಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು.
ಇತಿಹಾಸ ಪ್ರಸಿದ್ಧ ಕೆರೆ: ಈ ಹಿಂದೆ ತೀವ್ರ ಬರಗಾಲ ಎದುರಾದ ಸಂದರ್ಭ ಊರಿನ ಪ್ರಮುಖರು ಗ್ರಾಮದ 16 ಎಕರೆ ಪ್ರದೇಶದಲ್ಲಿ ದೊಡ್ಡಕೆರೆಯೊಂದನ್ನು ನಿರ್ಮಿಸಲು ಮುಂದಾದರು. ನೂರಾರು ಮಂದಿ ಕೆರೆ ನಿರ್ಮಿಸುವ ಕಾರ್ಯದಲ್ಲಿ ಮಗ್ನರಾದರು. ಆದರೆ ಎಷ್ಟೇ ಆಳ ತೆಗೆದರೂ ಕೆರೆಯಲ್ಲಿ ಒಂದು ಹನಿ ನೀರೂ ಬರಲಿಲ್ಲ. ಅಂತಹ ಸನ್ನಿವೇಶದಲ್ಲಿ ಹೊನ್ನಿನ ಗುಣ ಹೊಂದಿದ್ದ ಹೊನ್ನಮ್ಮ ತಾನೇ ಕೆರೆಗೆ ಹಾರವಾದಳು. ಅಂದು ತುಂಬಿದ ಕೆರೆ ಇಂದಿಗೂ ಬತ್ತಿಲ್ಲ ಎಂಬ ಪ್ರತೀತಿ ಈ ಕ್ಷೇತ್ರವ್ಯಾಪ್ತಿಯಲ್ಲಿದ್ದು, ಬಸವೇಶ್ವರ ದೇವಾಲಯದ ಪಕ್ಕದಲ್ಲಿಯೇ ಹೊನ್ನಮ್ಮ ತಾಯಿಗೆ ದೇವಾಲಯ ನಿರ್ಮಿಸಲಾಗಿದೆ. ಪ್ರತಿ ಗೌರಿ ಹಬ್ಬದ ದಿನದಂದು ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಾಗಿನ ಅರ್ಪಿಸುವ ಕಾರ್ಯ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಅಂದು ತುಂಬಿದ ಕೆರೆ ಇಂದಿನವರೆಗೂ ಬತ್ತದೇ ಇರುವದು ದೈವೇಚ್ಛೆ ಎಂಬ ನಂಬಿಕೆ ಎಲ್ಲರಲ್ಲಿದ್ದು, ಹೊನ್ನಮ್ಮನ ಕೆರೆಯನ್ನು ಇಂದಿಗೂ ವಿಶೇಷ ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಇದರೊಂದಿಗೆ ಈ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದ ಕೃಷಿ ಕಾರ್ಯಕ್ಕೂ ಹೊನ್ನಮ್ಮನ ಕೆರೆ ಮೂಲಾಧಾರವಾಗಿದ್ದು, ಕೃಷಿಕ ವರ್ಗದ ಜೀವನಾಧಾರವಾಗಿದೆ.