ಗೋಣಿಕೊಪ್ಪಲು, ಆ.30 : ದ.ಕೊಡಗಿನ ಶ್ರೀಮಂಗಲ ಹೋಬಳಿಯ ಕುರ್ಚಿ, ಬೀರುಗ ಹಾಗೂ ಮಂಚಳ್ಳಿ ಗ್ರಾಮದಲ್ಲಿ 50ಕ್ಕೂ ಅಧಿಕ ಕಾಡಾನೆಗಳು ರೈತರ ತೋಟದಲ್ಲಿ ಕಾಣಿಸಿಕೊಂಡಿರುವುದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಕುರ್ಚಿ ಗ್ರಾಮದ ಅಜ್ಜಮಾಡ ರವಿ ಚಂಗಪ್ಪ, ಪೊನ್ನಮ್ಮ ಮೋಟಯ್ಯ ಅವರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ತಡ ರಾತ್ರಿಯಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ದಾಳಿ ನಡೆಸಿವೆ. ಇದರಿಂದ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ಅಪಾರ ಹಾನಿ ಸಂಭವಿಸಿದೆ. ರೈತರು ಕಾಫಿ ತೋಟಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.
ಕಳೆದೆರಡು ತಿಂಗಳ ಹಿಂದೆ ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ವರ್ಗಾವಣೆಗೊಂಡ ನಂತರ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಪ್ರಭಾರ ಅಧಿಕಾರಿಯನ್ನು ನಿಯೋಜಿಸಲಾಗಿದೆ ಆದರೆ ಈ ಅಧಿಕಾರಿಯಿಂದ ಈ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತಿಲ್ಲ ಎಂಬ ಬಗ್ಗೆ ಆರೋಪ ಕೇಳಿ ಬಂದಿದೆ.
ಈ ಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಯ ವತಿಯಿಂದ ಲಕ್ಷಾಂತರ ವೆಚ್ಚದಲ್ಲಿ ಸೋಲಾರ್ ಬೇಲಿ ನಿರ್ಮಿಸಿದ್ದರೂ ಈ ಭಾಗದ ಸೋಲಾರ್ ಬೇಲಿಗಳು ನಿರ್ವಹಣೆ ಇಲ್ಲದೆ ಹಾಳಾಗಿದೆ. ರೈತರ ತೋಟಗಳಿಗೆ ನಿರಂತರ ಕಾಡಾನೆಗಳು ಲಗ್ಗೆ ಇಡುತ್ತಿರುವುದರಿಂದ ರೈತರಿಗೆ ದಿಕ್ಕೆ ತೋಚದಂತಾಗಿದೆ. ಹಗಲಿನ ವೇಳೆಯೇ ರಸ್ತೆಯ ಬದಿಯಲ್ಲಿ ಕಾಡಾನೆಗಳ ದರ್ಶನವಾಗುತ್ತಿರುವುದರಿಂದ ರೈತರಿಗೆ ಹಾಗೂ ನಾಗರಿಕರಿಗೆ ಸಂಚಾರ ನಡೆಸಲು ಕಷ್ಟವಾಗುತ್ತಿದೆ.
ಈ ಭಾಗದಲ್ಲಿರುವ ಬಹು ಸಂಖ್ಯೆಯ ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟುವ ಕೆಲಸ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ತುರ್ತಾಗಿ ನಡೆಯಬೇಕೆಂದು ಆ ಭಾಗದ ರೈತ ಮುಖಂಡರಾದ ಅಜ್ಜಮಾಡ ಚಂಗಪ್ಪ ಆಗ್ರಹಿಸಿದ್ದಾರೆ.