ಸೋಮವಾರಪೇಟೆ,ಆ.೨೯: ಇಲ್ಲಿನ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಜಾತ್ಯಾತೀತ ಜನತಾ ದಳದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ಇಲ್ಲಿನ ವಿವೇಕಾನಂದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಸರ್ಕಾರದ ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ತಾಲೂಕು ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಿ. ಮತ್ತು ಡಿ. ಜಮೀನಿಗೆ ಕೆಲವರಿಗೆ ಮಾತ್ರ ಪಟ್ಟೆ ನೀಡಿ ಉಳಿದವರನ್ನು ವಂಚಿಸಲಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಗ್ಗನ ಅನಿಲ್ ಆರೋಪಿಸಿದರು.
ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಫಾರಂ ೫೦-೫೩ ಅಡಿಯಲ್ಲಿ ೧೯೯೨ ರಿಂದ ೧೯೯೯ರವರೆಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಕೆಲವು ಪಕ್ಷದವರು, ಹಣ ನೀಡಿದವರಿಗೆ ಮಾತ್ರ ಭೂಮಿ ಮಂಜೂರಾಗಿದೆ. ಬಡ ರೈತರು ಮತ್ತು ಮಧ್ಯಮ ವರ್ಗದವರಿಗೆ ಪಟ್ಟೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿ ಮತ್ತು ಡಿ ವರ್ಗದ ಜಮೀನಿನ ಬಗ್ಗೆ ೧೯೯೬ರಲ್ಲಿ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು, ಇಂತಹ ಭೂಮಿಯನ್ನು ವರ್ಗೀಕರಣ ಮಾಡುವಂತೆ ಸೂಚಿಸಿದೆ. ೨೦೧೭ರಲ್ಲಿಯೂ ಸರ್ಕಾರ ಆದೇಶ ಮಾಡಿದೆ. ಆದರೆ ಅಧಿಕಾರಿಗಳು ಹಣ ಪಡೆದು ಕೆಲವರಿಗೆ ಮಾತ್ರ ಪಟ್ಟೆ ನೀಡುತ್ತಿದ್ದಾರೆ ಎಂದು ಅನಿಲ್ ಆರೋಪಿಸಿದರು.
ಪಟ್ಟೆಗಾಗಿ ನೆಮ್ಮದಿ ಕೇಂದ್ರ, ತಾಲೂಕು ಕಚೇರಿಗೆ ಅಲೆದು ಬಡ ರೈತರು ಸುಸ್ತಾಗಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬAತೆ ಆಡಳಿತ ನಡೆಯುತ್ತಿದೆ.ತಾಲೂಕು ಕಚೇರಿಯಲ್ಲಿ ಸರ್ವೆ ನಂಬರ್ ದುರಸ್ತಿಗೆ ಅರ್ಜಿ ಕೊಟ್ಟರೆ ದುರಸ್ತಿ ಮಾಡುತ್ತಿಲ್ಲ. ಬ್ರೋಕರ್ಗಳ ಮೂಲಕ ಲಕ್ಷಗಟ್ಟಲೆ ಹಣ ನೀಡಿದರೆ ಮಾತ್ರ ದುರಸ್ತಿ ಆಗುತ್ತಿದೆ ಎಂದು ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ದೂರಿದರು.
ಒಂದೇ ಪೈಸಾರಿ ಸರ್ವೆ ನಂಬರ್ನ ಸಿ ಮತ್ತು ಡಿ ಜಮೀನಿಗೆ ಹಲವರಿಗೆ ಪಟ್ಟೆ ಕೊಟ್ಟಿದ್ದು, ರಾಜಕೀಯ ಕಾರಣದಿಂದ ಕೆಲವರಿಗೆ ಕೊಟ್ಟಿಲ್ಲ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಆರೋಪಿಸಿದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು, ಪ್ರತಿಭಟನಾಕಾರರ ಮನವಿ ಆಲಿಸಿದರು. ಸಿ ಮತ್ತು ಡಿ ವರ್ಗದ ಜಮೀನಿನ ಬಗ್ಗೆ ಸರ್ಕಾರದ ನಿಯಮಾವಳಿಯನ್ನು ಪಾಲಿಸಲಾಗುತ್ತಿದೆ. ಪಟ್ಟೆಗಾಗಿ ಯಾರಿಗೂ ಹಣ ನಿಡುವ ಅಗತ್ಯವಿಲ್ಲ. ಸರ್ಕಾರ ನಿಗದಿಪಡಿಸುವ ಶುಲ್ಕವನ್ನಷ್ಟೇ ಭರಿಸಬೇಕಿದೆ ಎಂದರು.
ಈ ಸಂದರ್ಭ ಪ್ರತಿಭಟನಾಕಾರರು ತಹಶೀಲ್ದಾರ್ ಮೇಲೆ ಮುಗಿಬೀಳಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ತಡೆದರು. ಅಂತಿಮವಾಗಿ ತಾಲೂಕು ಕಚೇರಿಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಎಂ.ಎ. ರುಬೀನಾ, ಯುವ ಜೆಡಿಎಸ್ ಅಧ್ಯಕ್ಷ ತ್ರಿಶೂಲ್, ಸ್ವಾಗತ್, ಅಜಿತ್, ಶರಣ್, ಜಯಾನಂದ, ಆದರ್ಶ್ ತಮ್ಮಯ್ಯ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.