ಲೈಂಗಿಕ ದೌರ್ಜನ್ಯ ಪ್ರಕರಣ-ಸಂತ್ರಸ್ತೆಯರ ಹೇಳಿಕೆ ದಾಖಲು
ಚಿತ್ರದುರ್ಗ, ಆ. ೨೮: ಚಿತ್ರದುರ್ಗದ ಪ್ರತಿಷ್ಠಿತ ಮುರುಘಾಮಠದ ಡಾ. ಶಿವಮೂರ್ತಿ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದಡಿ ದಾಖಲಾಗಿರುವ ಪ್ರಕರಣ ಇದೀಗ ರಾಜ್ಯವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಶ್ರೀಗಳ ಪರ ವಕೀಲರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಆರೋಪವು ಶ್ರೀಗಳಿಗೆ ಕಂಟಕವಾಗಿದೆ. ಈ ಘಟನೆ ಸಂಬAಧ ಸಂತ್ರಸ್ತೆ ಬಾಲಕಿಯರ ವಿಚಾರಣೆಯನ್ನು ಅಧಿಕಾರಿಗಳು ಮಾಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಪೋಷಕರ ಹೇಳಿಕೆಯನ್ನು ಪಡೆಯಲಾಗಿದೆ. ಈ ಪ್ರಕರಣದಲ್ಲಿ ರಾಜಿ ಸಂಧಾನಕ್ಕೂ ಅವಕಾಶವಿಲ್ಲದಿರುವುದು ಮುರುಘಾ ಶ್ರೀಗಳಿಗೆ ಇದು ಕಗ್ಗಂಟಾಗಿ ಪರಿಣಮಿಸಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್ ಮೇಲ್ ಕೇಸ್ ದಾಖಲಾಗಿರುವ ಹಿನ್ನಲೆಯಲ್ಲಿ ಚಿತ್ರದುರ್ಗ ಮಾಜಿ ಶಾಸಕ ಹಾಗೂ ಮುರುಘಾಮಠದ ಆಡಳಿತಾಧಿಕಾರಿಯಾದ ಎಸ್.ಕೆ. ಬಸವರಾಜನ್ ಅವರ ಮನೆಗೆ ಬೀಗ ಹಾಕಲಾಗಿದೆ. ಈ ಪ್ರಕರಣವನ್ನು ಇಲ್ಲಿಗೆ ಕೈಬಿಡಲು ಸಂಧಾನ ಸಭೆ ನಡೆಯುತ್ತಿದ್ದು, ಆದರೆ ಈ ಸಂಧಾನ ಸಭೆ ವಿಫಲವಾಗಿದೆ. ರಾತ್ರಿ ಚಿತ್ರದುರ್ಗದ ಸಿದ್ದಾಪುರ ನಾಗರಾಜ್ ಅವರ ಮನೆಯಲ್ಲಿ ಉದ್ಯಮಿ ಕೆ.ಸಿ. ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿದ್ದರು. ಸಭೆಯಲ್ಲಿ ಭಗೀರಥ ಪೀಠದ ಪುರುಷೋತ್ತಮ ನಂದಶ್ರೀಗಳು, ಬಸವಕುಮಾರ ಸ್ವಾಮೀಜಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಇದೀಗ ಈ ಸಭೆ ವಿಫಲವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪೊಲೀಸರು ಇಬ್ಬರು ಬಾಲಕಿಯರ ಹೇಳಿಕೆ ಪಡೆದಿದ್ದಾರೆ. ಇತ್ತ ಬಾಲಮಂದಿರಕ್ಕೆ ಬಾಲಕಿಯರ ಪೋಷಕರು ಆಗಮಿಸಿದ್ದರು. ಮತ್ತೊಂದು ಕಡೆ ಮಠದ ಆಡಳಿತಾಧಿಕಾರಿ ಎಸ್.ಕೆ. ಬಸವರಾಜ್ ಮತ್ತು ಅವರ ಪತ್ನಿ ಯಾರ ಸಂಪರ್ಕಕ್ಕೂ ಸಿಗದೇ ಗೌಪ್ಯ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ. ಮುರುಘಾ ಶ್ರೀಗಳ ಮೇಲೆ ಪೋಕ್ಸೋ ಅಡಿ ಎಫ್ಐಆರ್ ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ತನಿಖೆ ನಂತರ ಸತ್ಯ ಹೊರಗೆ ಬರಲಿದೆ ಎಂದರು.
ಹಿಜಾಬ್ ವಿವಾದ-ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ
ನವದೆಹಲಿ, ಆ. ೨೮: ಕರ್ನಾಟಕ ಸರ್ಕಾರವು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ನಿಷೇಧಿಸಿದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪು ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗಳನ್ನು ತಾ. ೨೯ ರಂದು (ಇಂದು) ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಕಳೆದ ಕೆಲವು ದಿನಗಳಿಂದ ತಣ್ಣಗಾದಂತೆ ಕಂಡುಬAದಿದ್ದ ಹಿಜಾಬ್ ವಿಷಯ ಮತ್ತೆ ಮುನ್ನಲೆಗೆ ಬರಲಿದೆ. ವಿಚಾರಣೆಯ ಅಂತ್ಯದಲ್ಲಿ ಸುಪ್ರೀಂ ತೀರ್ಪು ಯಾರ ಪರವಾಗಿರಲಿದೆ? ರಾಜ್ಯ ಸರಕಾರಕ್ಕೆ ಹಿನ್ನಡೆಯಾಗಲಿದೆಯೇ? ಮೇಲ್ಮನವಿ ಸಲ್ಲಿಸಿದವರಿಗೆ ಹಿನ್ನಡೆಯಾಗಲಿದೆಯೇ? ಇತ್ಯಾದಿ ಪ್ರಶ್ನೆಗಳೂ ಮೂಡಿವೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ತಾ. ೨೯ ರಂದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್ನ ಆದೇಶದ ವಿರುದ್ಧದ ಮೇಲ್ಮನವಿಗಳ ವಿಚಾರಣೆ ನಡೆಸಲಿದೆ. ಸರಕಾರಿ ಅಧಿಕಾರಿಗಳ ಮಲತಾಯಿ ಧೋರಣೆಯು ವಿದ್ಯಾರ್ಥಿಗಳ ನಂಬಿಕೆಯನ್ನು ಕಸಿದುಕೊಳ್ಳುತ್ತದೆ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಮಾಡುತ್ತದೆ, ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ. ಹೈಕೋರ್ಟ್ನ ತೀರ್ಪು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ. ಭಾರತದ ಸಂವಿಧಾನದ ೨೫ನೇ ವಿಧಿಯ ಅಡಿಯಲ್ಲಿ ನೀಡಲಾದ ಅಗತ್ಯ ಧಾರ್ಮಿಕ ಆಚರಣೆಗಳ ಮೂಲಭೂತ ಅಂಶಗಳಿಗೆ ಪೂರಕವಾಗಿಲ್ಲ. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಗತ್ಯವಾಗಿದೆ ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ. ಹಿಜಾಬ್ ಧರಿಸಿ ಪ್ರವೇಶ ನಿರಾಕರಿಸಿದ್ದಕ್ಕಾಗಿ ವಿದ್ಯಾರ್ಥಿನಿಯರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಮಾರ್ಚ್ ೧೫ ರಂದು ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಹೈಕೋರ್ಟ್ ಪೀಠವು ಅರ್ಜಿಗಳನ್ನು ವಜಾಗೊಳಿಸುವಾಗ, ಹಿಜಾಬ್ ಅಭ್ಯಾಸವು ಇಸ್ಲಾಂ ಧರ್ಮದ ಅಡಿಯಲ್ಲಿ ಅತ್ಯಗತ್ಯವಾದ ಆಚರಣೆಯಲ್ಲ ಮತ್ತು ಆದ್ದರಿಂದ ಭಾರತದ ಸಂವಿಧಾನದ ೨೫ನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಮಾರ್ಚ್ ೧೫, ೨೦೨೨ ರಂದು ಸುಪ್ರೀಂ ಕೋರ್ಟ್ಗೆ ವಿವಿಧ ಅರ್ಜಿಗಳನ್ನು ಸಲ್ಲಿಸಲಾಯಿತು.
ಸ್ಮೃತಿ ವನ್ ಸ್ಮಾರಕವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ಭುಜ್, ಆ. ೨೮: ೨೦೦೧ರಲ್ಲಿ ಗುಜರಾತ್ನ ಕಚ್ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಸಮಯದಲ್ಲಿ ಜನರು ತೋರಿದ ಸ್ಥಿತಿಸ್ಥಾಪಕತ್ವವನ್ನು ಆಚರಿಸುವ ಸ್ಮೃತಿ ವನ್ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಸ್ಮೃತಿ ವನ್ ಕಳೆದುಹೋದ ಜೀವಗಳಿಗೆ ಮತ್ತು ಕಚ್ ಜನರ ಗಮನಾರ್ಹ ಹೋರಾಟದ ಮನೋಭಾವಕ್ಕೆ ಗೌರವವಾಗಿದೆ ಎಂದು ಮೋದಿ ಹೇಳಿದರು. ಭುಜ್ನಲ್ಲಿ ಭೂಕಂಪನದ ತೀವ್ರತೆ ಹೆಚ್ಚಾಗಿದ್ದು ಈ ವೇಳೆ ೧೩,೦೦೦ ಜನರು ಸಾವನ್ನಪ್ಪಿದರು. ಇದರಿಂದ ಹೊರಬರುವ ಮನೋಭಾವವನ್ನು ಆಚರಿಸಲು ಸುಮಾರು ೪೭೦ ಎಕರೆಗಳಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ಮಾರಕದಲ್ಲಿ ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಜನರ ಹೆಸರು ಇರಲಿದೆ. ಇದು ಅತ್ಯಾಧುನಿಕ ಸ್ಮೃತಿ ವನ್ ಭೂಕಂಪ ವಸ್ತು ಸಂಗ್ರಹಾಲಯವನ್ನು ಸಹ ಹೊಂದಿದೆ. ವಸ್ತು ಸಂಗ್ರಹಾಲಯದಲ್ಲಿ ಗುಜರಾತ್ನ ಸ್ಥಳಾಕೃತಿ, ಪುನರ್ ನಿರ್ಮಾಣ ಉಪಕ್ರಮಗಳು, ೨೦೦೧ರ ಭೂಕಂಪದ ನಂತರದ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸುತ್ತದೆ. ವಿವಿಧ ರೀತಿಯ ವಿಪತ್ತುಗಳು ಮತ್ತು ಯಾವುದೇ ರೀತಿಯ ವಿಪತ್ತಿಗೆ ಭವಿಷ್ಯದ ಸಿದ್ಧತೆಯ ಬಗ್ಗೆ ತಿಳಿಸುತ್ತದೆ. ಇದು ೫ಡಿ ಸಿಮ್ಯುಲೇಟರ್ನ ಸಹಾಯದಿಂದ ಭೂಕಂಪದ ಅನುಭವವನ್ನು ಮರುಕಳಿಸಲು ಒಂದು ಬ್ಲಾಕ್ ಅನ್ನು ಹೊಂದಿದೆ. ಮೃತ ಜನರ ಆತ್ಮಗಳಿಗಾಗಿ ಗೌರವ ಸಲ್ಲಿಸಲು ಮತ್ತೊಂದು ಬ್ಲಾಕ್ ಅನ್ನು ಹೊಂದಿದೆ.
ಮಳೆಹಾನಿ ಸಂಬAಧ ಸಿಎಂ ವೀಡಿಯೋ ಸಂವಾದ
ಬೆAಗಳೂರು, ಆ. ೨೮: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಗೃಹ ಕಚೇರಿ ಕೃಷ್ಣಾದಿಂದ ಇತ್ತೀಚೆಗೆ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಳೆಯಿಂದಾದ ಹಾನಿಯ ವಿವರ ಪಡೆದರು. ಮಳೆಯಿಂದ ಜಿಲ್ಲೆಗಳಲ್ಲಿ ಸಂಭವಿಸಿರುವ ಮನೆಹಾನಿಗೆ ತಕ್ಷಣ ಪರಿಹಾರ ಒದಗಿಸಬೇಕು. ಬೆಳೆಹಾನಿಯ ನಿಖರ ಮಾಹಿತಿ ಪಡೆಯಬೇಕು ಹಾಗೂ ರಸ್ತೆ ಹಾನಿಯಿಂದ ವಾಹನ ಸಂಚಾರ ಸುಗಮವಾಗದಿದ್ದಲ್ಲಿ ವಾಹನ ಸಂಚಾರ ಮಾರ್ಗ ಬದಲಾಯಿಸಬೇಕು ಎಂದು ಸೂಚನೆಗಳನ್ನು ನೀಡಿದರು. ವೀಡಿಯೋ ಸಂವಾದದಲ್ಲಿ ಸಚಿವ ಎಸ್.ಟಿ. ಸೋಮಶೇಖರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಮತ್ತಿತರರು ಪಾಲ್ಗೊಂಡಿದ್ದರು.
ಎಐಸಿಸಿ ಅಧ್ಯಕ್ಷರ ಚುನಾವಣೆ
ನವದೆಹಲಿ, ಆ. ೨೮: ಮುಂದಿನ ಎಐಸಿಸಿ ಅಧ್ಯಕ್ಷರ ಚುನಾವಣೆ ಸಂಬAಧ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ)ಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು ಅಕ್ಟೋಬರ್ ೧೭ ರಂದು ಚುನಾವಣೆ ನಡೆಯಲಿದೆ. ಕಳೆದ ಶುಕ್ರವಾರ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆಯಿಂದ ಪಕ್ಷಕ್ಕೆ ದೊಡ್ಡ ಹೊಡೆತವಾಗಿದ್ದು ಇದರ ನಡುವೆ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆಯಾಗಿ ತೀವ್ರ ಕಸರತ್ತು ನಡೆದಿದೆ. ಪಕ್ಷದ ಅಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್ ೨೨ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಸೆಪ್ಟೆಂಬರ್ ೨೪ ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ ೩೦ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.