ನಾಪೋಕ್ಲು, ಆ. ೨೮: ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳಿಬಾಣೆಯಲ್ಲಿ (ಮರಪಾಲ) ಕಾವೇರಿ ನದಿಗೆ ಸಂಪರ್ಕಿಸುವ ತೊರೆಯ ಬದಿಯಲ್ಲಿ ಸಾವನ್ನಪ್ಪಿದ ಹಂದಿಗಳನ್ನು ಎಸೆದಿರುವ ಘಟನೆ ನಡೆದಿದೆ. ಸಾವಿಗೀಡಾಗಿರುವ ಎರಡು ಹಂದಿಗಳ ಶವ ಚೌರೀರ ಉದಯ ಎಂಬವರ ಜಾಗದ ಸಮೀಪ ಹರಿಯುವ ನದಿಯಲ್ಲಿ ಕಿಡಿಗೇಡಿಗಳು ಎಸೆದು ಹೋಗಿದ್ದಾರೆ. ಎರಡು ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದೆ.
ಹಲವು ಸಮಯದಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಕಾವೇರಿ ನದಿಯು ಕಲುಷಿತಗೊಳ್ಳುತ್ತಲೇ ಬಂದಿದೆ. ಮೀನು, ಮಾಂಸ, ಊಟದ ತ್ಯಾಜ್ಯಗಳು ನದಿ ದಂಡೆಯಲ್ಲಿ ತಂದು ಎಸೆಯುವುದು ಸಾಮಾನ್ಯವಾಗಿದೆ.
ಪೂಜನೀಯ ಭಾವದಲ್ಲಿ ನೋಡುವ ಕಾವೇರಿ ನದಿಯ ಪಾವಿತ್ರö್ಯತೆಗೆ ಧಕ್ಕೆ ತರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾವೇರಿ ಅಚ್ಚುಕಟ್ಟಿನಲ್ಲಿರುವ ಗ್ರಾಮ ಪಂಚಾಯ್ತಿಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಕಾವೇರಿ ಪಾವಿತ್ರö್ಯತೆ ಉಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಪ್ಪಿದರೆ, ತವರಿನಲ್ಲೇ ಕಾವೇರಿಗೆ ಅಪಚಾರವಾಗುತ್ತಿರುವ ಪಾಪವನ್ನು ನಾವೇ ಹೊತ್ತುಕೊಳ್ಳುವ ದಿನ ದೂರವಿಲ್ಲ.
ವರದಿ: ದುಗ್ಗಳ ಸದಾನಂದ