‘ನೂರು ವರುಷ ಆಳಿನಂತೆ ಬದುಕುವುದು ಬದುಕಲ್ಲ, ಒಂದು ವರ್ಷ ರಾಜನಂತೆ ಬದುಕಿದರೂ ಸಾರ್ಥಕ’ ಎಂಬAತೆ ತನ್ನ ೨೩ನೇ ವರ್ಷದಲ್ಲಿಯೇ ದೇಶಕ್ಕಾಗಿ ವೀರ ಮರಣವನ್ನಪ್ಪಿದ ಭಗತ್ ಸಿಂಗ್‌ರ ೧೧೫ನೇ ಜನ್ಮದಿನ ಇಂದು. ಸೆಪ್ಟೆಂಬರ್ ೨೮, ೧೯೦೭ ರಂದು ಪಂಜಾಬ್‌ನ ಬಂಗಹಳ್ಳಿಯಲ್ಲಿ ತಂದೆ ಕಿಶನ್ ಸಿಂಗ್ ಹಾಗೂ ತಾಯಿ ವಿದ್ಯಾವತಿ ಕೌರ್ ದಂಪತಿಗಳ ಮಗನಾಗಿ ಜನಿಸಿದರು. ಅಜ್ಜ ಅರ್ಜುನ್ ಸಿಂಗ್ ಅಪ್ಪಟ ದೇಶಾಭಿಮಾನಿ. ಸ್ವಾಮಿ ದಯಾನಂದ ಸರಸ್ವತಿಯವರ ಅನುಯಾಯಿಗಳಾಗಿದ್ದ ಇವರು ತನ್ನ ಮಕ್ಕಳಲ್ಲಿ ಸ್ವರಾಜ್ಯದ ಪರಿಕಲ್ಪನೆ, ಸ್ವಾತಂತ್ರ‍್ಯವೆAಬ ದೇಶಾಭಿಮಾನವನ್ನು ಬೆಳೆಸಿದ ಕೆಚ್ಚೆದೆಯ ಸರದಾರ. ತನ್ನ ಚಿಕ್ಕಪ್ಪಂದಿರಾದ ಅಜಿತ್ ಸಿಂಗ್, ಸ್ವರಣ್ ಸಿಂಗ್ ಅವರು ಭಗತ್ ಸಿಂಗ್ ಹುಟ್ಟುವಾಗಲೇ ಸ್ವಾತಂತ್ರ‍್ಯದ ಹೋರಾಟದಲ್ಲಿ ಬ್ರಿಟೀಷರ ಸೆರೆವಾಸಕ್ಕೆ ಸಿಲುಕಿದ್ದರು. ಅವರ ಬಿಡುಗಡೆಯ ದಿನವೇ ಭಗತ್‌ನ ಜನನವೂ ಕೂಡ. ಹಾಗಾಗಿ ಭಗತ್ ಎಂದರೆ ಭಾಗ್ಯವಂತ ಎಂಬ ಅರ್ಥದಲ್ಲಿ ಅವನಿಗೆ ಅಜ್ಜ ನಾಮಕರಣ ಮಾಡಿದ್ದು ಕೇವಲ ಅವರ ಮನೆಗಷ್ಟೇ ಅಲ್ಲಾ ನಾಡಿಗೂ ಭಾಗ್ಯವಂತನೇ ಆಗಿಬಿಟ್ಟರು.
ತಮ್ಮ ಚಿಕ್ಕಮ್ಮಂದಿರ ಸಂಕಷ್ಟದ ಬದುಕಿಗೆ ಕಾರಣರಾದ ಬ್ರಿಟೀಷರ ಅಟ್ಟಹಾಸವನ್ನು ಹುಟ್ಟಿನಿಂದಲೇ ದ್ವೇಷಿಸುತ್ತಾ ಬೆಳೆಯುತ್ತಾರೆ ಭಗತ್ ಸಿಂಗ್. ಒಮ್ಮೆ ಅಜ್ಜ ತಮ್ಮ ಕೃಷಿ ಭೂಮಿಗೆ ಐದು ವರ್ಷ ಪ್ರಾಯದ ಭಗತ್ ಸಿಂಗ್‌ನನ್ನು ಕರೆದುಕೊಂಡು ಹೋಗಿದ್ದು, ಮುಗ್ಧ ಮಗುವಿಗೆ ಗೋಧಿ ಬೆಳೆಯುವ ಬಗೆಯನ್ನು ವಿವರಿಸುತ್ತಾರೆ. ತಕ್ಷಣವೇ ಭಗತ್ ಸಿಂಗ್ ಮನೆಯಿಂದ ಬಂದೂಕನ್ನು ತಂದು ಅದೇ ಭೂಮಿಯಲ್ಲಿ ನೆಟ್ಟು ಅಜ್ಜನಿಗೆ ಹೇಳುತ್ತಾನೆ. ಬೆಳೆಯ ಬದಲು ಬಂದೂಕನ್ನು ಬೆಳೆದರೆ ಬ್ರಿಟಿಷರನ್ನು ಓಡಿಸಲು ಸಹಾಯವಾಗುತ್ತದೆ ಎಂದು. ಇಲ್ಲಿ ತನ್ನ ಮುಗ್ಧ ಚಿಂತನೆಯಲ್ಲಿ ಸ್ವಾತಂತ್ರ‍್ಯದ ಕಿಡಿಯನ್ನು ಹೊತ್ತಿಸಲು ಇದ್ದ ಉತ್ಸಾಹವನ್ನು ಕಾಣುತ್ತೇವೆ. ೧೯೧೯ ರಲ್ಲಿ ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ಸ್ಥಳಕ್ಕೆ ಹೋಗಿ ರಕ್ತದಿಂದ ತುಂಬಿ ಹೋಗಿದ್ದ ಭೂಮಿಯ ಮಣ್ಣನ್ನು ಬಾಟಲಿಯಲ್ಲಿ ತುಂಬಿಕೊAಡು ಮನೆಗೆ ತಂದು ತನ್ನ ತಂಗಿಯೊಡನೆ, ಇನ್ನು ಈ ಮನೆಯಲ್ಲಿ ಪೂಜೆ ಮಾಡುವುದಿದ್ದರೆ ಈ ಮಣ್ಣನ್ನು ಪೂಜೆ ಮಾಡಬೇಕು. ಇಲ್ಲದಿದ್ದರೆ ಯಾವುದೇ ಪೂಜೆಯ ಅಗತ್ಯವಿಲ್ಲ ಎಂದು ತನ್ನ ಒಡಲಾಳದಲ್ಲಿ ಅಡಗಿದ್ದ ಬೆಂಕಿಯನ್ನು ಹೊರಹಾಕುತ್ತಾನೆ. ಶಾಲಾ ದಿನಗಳಲ್ಲಿ, ತನ್ನ ವಿದ್ಯಾಭ್ಯಾಸದ ದಿನಗಳಲ್ಲಿ ಭಗತ್ ಸಿಂಗ್ ಓದಿದ್ದು ಕ್ರಾಂತಿ ಕಾರಿಗಳ ಲೇಖನಗಳನ್ನು. ಲೆನಿನ್ ವಿಚಾರಧಾರೆಗಳಿಂದ ಅತಿಯಾಗಿ ಪ್ರೇರಿತನಾಗಿದ್ದ ಭಗತ್ ಸಿಂಗ್ ತನ್ನ ಸಣ್ಣ ಪ್ರಾಯದಲ್ಲಿಯೇ ದೇಶಭಕ್ತರ, ವೀರಯೋಧರ, ಮಹಾನುಭಾವರಿಗೆ ಸಂಬAಧಿಸಿದ ಪುಸ್ತಕಗಳನ್ನು ಅತಿಯಾದ ಶ್ರದ್ಧೆಯಿಂದ ಓದುತ್ತಿದ್ದ. ಫ್ರಾನ್ಸ್ ಕ್ರಾಂತಿ, ರಷ್ಯಾಕ್ರಾಂತಿಯ ವಿಚಾರಗಳು ಭಗತ್ ಸಿಂಗ್‌ನಲ್ಲಿ ನವ ಭಾರತದ ನಿರ್ಮಾಣದ ಕನಸನ್ನು ಬಲವಾಗಿ ಹುಟ್ಟುಹಾಕಿದವು. ತರಗತಿಯಲ್ಲಿ ಉಪಾಧ್ಯಾಯರು ಮಕ್ಕಳನ್ನು ಕುರಿತು ಮುಂದೆ ಏನಾಗುವಿರಿ ಎಂದಾಗ ಡಾಕ್ಟರ್, ಇಂಜಿನಿಯರ್ ಎಂಬ ಉತ್ತರಗಳೇ ಎಲ್ಲರಿಂದ. ಆದರೆ ಭಗತ್ ಸಿಂಗ್ ಎದ್ದು ನಿಂತು ಹೇಳಿದ್ದು ಬ್ರಿಟಿಷರನ್ನು ಇಲ್ಲಿಂದ ಓಡಿಸುವುದಷ್ಟೇ ನನ್ನ ಉದ್ದೇಶವೆಂದು. ಇದನ್ನು ಕೇಳಿದ ಗುರುಗಳೇ ಒಮ್ಮೆ ತಟಸ್ಥರಾಗಿಬಿಟ್ಟರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬAತೆ ಇವನ ದಿಟ್ಟ ನಡವಳಿಕೆಯ ಕುರಿತು ಮನೆಯವರಿಗೂ ವರದಿ ನೀಡುತ್ತಾರೆ ಗುರುಗಳು. ಬ್ರಿಟೀಷರಿಗೆ ಸೆಡ್ಡು ಹೊಡೆದು ನಿಲ್ಲುವ ಎದೆಗಾರಿಕೆಯ ಕುರಿತು ತಂದೆಗಾದ ಆನಂದ ಅಷ್ಟಿಷ್ಟಲ್ಲ. ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ೧೭ ವರ್ಷ ಪ್ರಾಯದ ಮಗನಿಗೆ ಮದುವೆ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು ಎಂದು ತಾಯಿ ಮದುವೆಯ ಪ್ರಯತ್ನದಲ್ಲಿ ತೊಡಗಿಕೊಂಡಾಗ ಭಗತ್ ಆವೇಶದಿಂದ ಹೇಳಿದ್ದು ಮೊದಲು ಬೇಕಾಗಿರುವುದು ನನ್ನ ದೇಶಕ್ಕೆ ಸ್ವಾತಂತ್ರ‍್ಯ, ಅದಕ್ಕಾಗಿ ನನ್ನ ಬಲಿದಾನವೇ ಹೊರತು ವಿವಾಹವಲ್ಲ ಎಂದು. ತನ್ನ ಸ್ವತಂತ್ರ ಪ್ರವೃತ್ತಿಯಿಂದಲೇ ದಿನದಿಂದ ದಿನಕ್ಕೆ ಬ್ರಿಟೀಷರ ಪಾಲಿನ ಸಿಂಹ ಸ್ವಪ್ನ ನಾಗುತ್ತಾರೆ ಭಗತ್.
ಮುಂದಿನ ದಿನಗಳು ಸ್ವಾತಂತ್ರ‍್ಯಕ್ಕಾಗಿ ಭಾರತದ ಹೋರಾಟದ ದಿನಗಳು. ಗಾಂಧೀಜಿಯ ನಾಯಕತ್ವದಲ್ಲಿ ನಡೆಯುವ ಹೋರಾಟದ ಹಾದಿ ನೇರ, ದಿಟ್ಟ ನಡವಳಿಕೆಯ ಭಗತ್‌ಗೆ ಅದೇಕೋ ಹಿಡಿಸದಾಯಿತು. ತನ್ನದೇ ವಿಭಿನ್ನ ಚಿಂತನೆ, ಆದರ್ಶ, ಗುರಿ ಉದ್ದೇಶಗಳಿಂದ ಸ್ವಾಭಿಮಾನ ತುಂಬಿಕೊAಡ ಅಪ್ಪಟ ದೇಶಪ್ರೇಮಿ ಭಗತ್ ಹಿಡಿದಿದ್ದು ಕ್ರಾಂತಿಯ ಹಾದಿ. ಜೊತೆಗೆ ಸತ್ಯಾಗ್ರಹದ ಪಟ್ಟು ಹಿಡಿದು ಸೆರೆಮನೆಯಲ್ಲಿಯೂ ತನ್ನ ಪ್ರಭಾವ ಬೀರಿದ್ದ ಭಗತ್. ಪರಿಣಾಮ ಬ್ರಿಟಿಷರಿಂದ ಗಲ್ಲುಶಿಕ್ಷೆ. ಸುದ್ಧಿ ಬಿತ್ತರವಾಗು ತ್ತಿದ್ದಂತೆ ಅತಿಯಾಗಿ ಖುಷಿಪಟ್ಟವನು ಭಗತ್ ಸಿಂಗ್. ತನ್ನ ಸಾವು ಇತರರಿಗೆ ಸ್ಫೂರ್ತಿಯಾಗಬೇಕು? ತನ್ನ ನಂತರ ಸಾವಿರಾರು ಕ್ರಾಂತಿಕಾರರು ಹುಟ್ಟಿಕೊಳ್ಳುತ್ತಾರೆ, ಸಾವು ತನ್ನ ದೇಹಕ್ಕಷ್ಟೇ ಹೊರತು ವಿಚಾರಗಳಿಗಲ್ಲ. ಹೇಗೆ ಸತ್ತರೆ ಸಾವಿನಲ್ಲಿಯೂ ಸಾರ್ಥಕತೆ ಮೆರೆಯಬಹುದೆಂಬ ಸತ್ಯವನ್ನು ಜಗತ್ತಿಗೆ ತೋರ್ಪಡಿಸಿದ ಚಿರಂಜೀವಿ ಭಗತ್.
ನೇಣು ಗಂಬಕ್ಕೆ ಏರುವ ಸಂದರ್ಭದಲ್ಲಿ ತನ್ನ ಕೈಗಳನ್ನು ಕಟ್ಟಬಾರದು, ಮುಖವನ್ನು ವಸ್ತçದಿಂದ ಮುಚ್ಚಬಾರದು ಎಂಬ ಕೊನೆಯ ಬೇಡಿಕೆ ಇಟ್ಟಿದ್ದ ಭಗತ್ ಆ ಸಂದರ್ಭದಲ್ಲಿಯೂ ಇನ್ ಕ್ವಿ ಲಾಬ್ ಜಿಂದಾಬಾದ್ ಘೋಷಣೆಯನ್ನು ಕೂಗುತ್ತಾ, ಬ್ರಿಟೀಷರು ಇನ್ನೂ ಕುಸಿಯುವಂತೆ ನಗುನಗುತ್ತಲೇ ವೀರ ಮರಣವನ್ನು ಅಪ್ಪಿದನು. ತನ್ನ ೨೩ ವರ್ಷ ಪ್ರಾಯದಲ್ಲಿ ಭಗತ್ ಸಿಂಗ್ ತನ್ನ ಮಾತೃ ಭೂಮಿಗಾಗಿ ತನ್ನನ್ನೇ ಬಲಿದಾನ ನೀಡಿ ತನ್ನ ಸಾವು ಇತರರಿಗೆ ಮಾದರಿಯಾಗಬೇಕೆಂದು ಆಶಿಸಿದ ಮಹಾನ್ ಶಕ್ತಿ. ಚಂದ್ರ ಶೇಖರ ಆಜಾದ್, ಸುಖ್ ದೇವ್, ರಾಜ್ ಗುರುರಂತಹ ಅದೆಷ್ಟೋ ಕ್ರಾಂತಿ ವೀರರನ್ನು ಈ ದೇಶ ತನ್ನ ಬಿಡುಗಡೆಯ ಹಾದಿಯಲ್ಲಿ ಬಲಿದಾನ ಪಡೆದಿದೆ. ಅವರೆಲ್ಲರ ಜೀವ, ಜೀವನವನ್ನೇ ಬಲಿ ಕೊಟ್ಟು ಪಡೆದ ಸ್ವಾತಂತ್ರ‍್ಯ ಇಂದು ಯಾವ ರೀತಿಯಲ್ಲಿ ಬಳಸಲ್ಪಡುತ್ತಿದೆ ಎಂಬುದನ್ನು ನಾವೆಲ್ಲರೂ ಆಲೋಚಿಸಬೇಕಾದ ವಿಚಾರ. ಭಗತ್‌ನಲ್ಲಿದ್ದ ಸ್ವತಂತ್ರ ಆಲೋಚನಾ ಶೀಲತೆ ನಿಜಕ್ಕೂ ಪ್ರಶಂಶನಾರ್ಹ. ಎಲ್ಲಿ ಅನ್ಯಾಯ ಕಾಣುತ್ತೋ ಅಲ್ಲಿ ಪ್ರಶ್ನಿಸುವ ಧೈರ್ಯವಿತ್ತು. ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುವ, ತಕ್ಕ ಉತ್ತರ ನೀಡುವ ಮನೋಬಲವಿತ್ತು. ಇಂತಹ ಅದ್ಭುತ ಚೈತನ್ಯ ಭಗತ್‌ನಲ್ಲಿ ಹುಟ್ಟಲು ಕಾರಣ ಇಡೀ ಮನೆಯ ವಾತಾವರಣ ಅಪ್ಪಟ ದೇಶಭಕ್ತ ಕುಟುಂಬ.
ಅಜ್ಜ, ತಂದೆ, ಚಿಕ್ಕಪ್ಪಂದಿರ ತ್ಯಾಗ, ಅವನ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ‘ಬಿತ್ತಿದಂತೆ ಬೆಳೆ' ಭಗತ್‌ನ ಮನಸ್ಸಿನಲ್ಲಿ ಸಾಕಾರಗೊಂಡಿದ್ದು ನಾಡಿನ ಬಿಡುಗಡೆಯ ರೂಪದಲ್ಲಿ. ಭಗತ್ ಇಂದು ಯುವ ಪೀಳಿಗೆಗೆ ಆದರ್ಶ ವ್ಯಕ್ತಿಯಾಗಿ ಮಾದರಿಯಾಗಬೇಕಲ್ಲದೆ ಸಿನಿಮಾ, ಫ್ಯಾಷನ್ ಲೋಕದಲ್ಲಿ ಮಿನುಗುವ ನಾಯಕ ನಟರಲ್ಲ. ಇಂತಹ ಅನೇಕ ವೀರ ಚರಿತ್ರೆಯನ್ನು ಹೊಂದಿರುವ ನಮ್ಮ ಪರಂಪರೆಯ ಕುರಿತು ಇಂದಿನ ಮಕ್ಕಳಿಗೆ ನಿರಂತರವಾಗಿ ಅರಿವನ್ನು ಮೂಡಿಸಬೇಕಾದ ಜವಾಬ್ದಾರಿ ನಮ್ಮದು. ತಂದೆ-ತಾಯAದಿರು, ಶಿಕ್ಷಕರು, ಪ್ರಭಾವಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸ್ಫೂರ್ತಿದಾಯಕ ವಿಚಾರಗಳು ವಿಭಿನ್ನ ರೂಪದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು. ಸ್ವಾತಂತ್ರ‍್ಯ ಎಂಬುದು ಭಾರತದ ಪಾಲಿನ ನಿರಂತರ ಹೋರಾಟದ ಫಲ ಎಂಬುದು ಮಕ್ಕಳ ಅರಿವಿಗೆ ಬಂದರೆ ಮಾತ್ರ ಇದರ ದುರುಪಯೋಗವನ್ನು ತಡೆಗಟ್ಟಲು ಸಾಧ್ಯ. ಇಂತಹ ವೈಚಾರಿಕ ಮನೋಭಾವ ಇಂದಿನ ಮಕ್ಕಳಲ್ಲಿ ಬಹಳ ಪ್ರಸ್ತುತ. ಮಕ್ಕಳಲ್ಲಿ ಮನೋದೃಢತೆಯಲ್ಲಿಯೂ ಕೊರತೆ ಕಾಣುತ್ತಿದ್ದೇವೆ. ಸರಿ-ತಪ್ಪುಗಳ ವಿಶ್ಲೇಷಣೆ, ದಿಟ್ಟ ನಿರ್ಧಾರ, ಅನ್ಯಾಯ-ಅಕ್ರಮದ ವಿರುದ್ಧ ಹೋರಾಡುವ ಪ್ರವೃತ್ತಿ, ಪರಹಿತಕ್ಕಾಗಿ ಶ್ರಮಿಸುವ ಗುಣ, ಅಪರಿಮಿತ ದೇಶಭಕ್ತಿ ಎಲ್ಲವೂ ನಮ್ಮ ಯುವ ಸಮುದಾಯಕ್ಕೆ ಭಗತ್ ಸಿಂಗ್‌ನ ಬಳುವಳಿ. ಇಂತಹ ವೀರ ಪುತ್ರರ ಜನನದಿಂದಾಗಿ ಮತ್ತೆ ಮತ್ತೆ ಈ ನಾಡು ಭಗತ್ ಸಿಂಗ್‌ನನ್ನು ಸ್ಮರಿಸುವಂತಾಗಲಿ. ಇನ್ ಕ್ವಿ ಲಾಬ್ ಜಿಂದಾಬಾದ್.
- ಪ್ರತಿಮ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಅನ್ಸ್ ಪದವಿ ಕಾಲೇಜು, ವೀರಾಜಪೇಟೆ.