ಮಡಿಕೇರಿ, ಆ.೨೭: ಕುಶಾಲನಗರ ಬಳಿಯ ಚಿಕ್ಕತ್ತೂರಿನಲ್ಲಿರುವ ಶ್ರೀಕೃಷ್ಣ ಗೋಶಾಲೆ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕ ದಾನಿಗಳಿಂದ ನೆರವು ಲಭಿಸುತ್ತಿಲ್ಲ, ಸರಕಾರದಿಂದಲೂ ಯಾವುದೇ ಸ್ಪಂದನ ಇಲ್ಲದಂತಾಗಿದೆ. ಹಾಗಾಗಿ ಗೋಶಾಲೆ ಮುಂದುವರಿಸಿಕೊAಡು ಹೋಗುವದು ಕಷ್ಟಕರವಾಗಿದ್ದು, ನೆರವು ಲಭಿಸದಿದ್ದಲ್ಲಿ ಗೋಶಾಲೆಯನ್ನು ಮುಚ್ಚಲು ತೀರ್ಮಾನಿಸಿರುವದಾಗಿ ಶ್ರೀಕೃಷ್ಣ ಗೋಶಾಲೆ ಟ್ರಸ್ಟ್ನ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಶಾಲೆಯ ಸಂಸ್ಥಾಪಕ ಅಧ್ಯಕ್ಷ ಹರೀಶ್ ಆಚಾರ್ಯ; ೨೦೧೮-೧೯ರಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ನೆಲೆ ಕಳೆದುಕೊಂಡ ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ಶ್ರೀಕೃಷ್ಣ ಗೋಶಾಲೆಯನ್ನು ಸ್ಥಾಪಿಸಲಾಯಿತು. ಅಲ್ಲಿ ೨೦೦ ಇಂಚಿಗೂ ಅಧಿಕ ಮಳೆ ಬೀಳುವುದರಿಂದ ಗೋವುಗಳಿಗೆ ತೊಂದರೆ ಆಗುತ್ತಿದ್ದುದರಿಂದ ಕುಶಾಲನಗರ ಬಳಿಯ ಚಿಕ್ಕತ್ತೂರಿಗೆ ಸ್ಥಳಾಂತರಿಸಲಾಗಿದೆ. ದಾನಿಗಳ ಸಹಕಾರದಿಂದ ಕಷ್ಟದಿಂದ ನಡೆಸಿ ಕೊಂಡು ಬರಲಾಗುತ್ತಿದ್ದು, ಗೋವುಗಳ ಔಷಧಿ, ಆಹಾರ, ಕಾರ್ಮಿಕರ ಸಂಬಳ ಹೀಗೇ ತಿಂಗಳಿಗೆ ೨ರಿಂದ ೩ ಲಕ್ಷದಷ್ಟು ವೆಚ್ಚವಾಗುತ್ತಿದೆ. ಇದೀಗ ಕೆಲವರು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಿದ್ದು, ಇದರಿಂದಾಗಿ ಸಾಲ ಮಾಡಿ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಏಕೈಕ ಗೋಶಾಲೆಯಿದ್ದು, ಜಾಗ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಇದುವರೆಗೆ ಸ್ಪಂದನ ದೊರೆತಿಲ್ಲ. ಹಾಗಾಗಿ ಮುನ್ನಡೆಸಲು ಕಷ್ಟವಾಗುತ್ತಿದೆ. ಯಾರಾದರೂ ದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಬಿಟ್ಟು ಕೊಡಲಾಗುವದು. ಸರಕಾರ ಅಥವಾ ದಾನಿಗಳಿಂದ ನೆರವು ಲಭಿಸದಿದ್ದಲ್ಲಿ ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಸುಳ್ಳು ಪ್ರಚಾರ
ಗೋಶಾಲೆಯಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಗೋಕಳ್ಳರ ಜೊತೆ ಶಾಮೀಲಾಗಿರು ವವರು ತಮ್ಮ ದಂಧೆಗೆ ಅಡ್ಡಿಯಾಗುತ್ತಿ ರುವ ಕಾರಣದಿಂದಾಗಿ ಈ ರೀತಿಯಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಮಾಧ್ಯಮಗಳ ಮೂಲಕ ಗೋಶಾಲೆಗೆ ಕೋಟಿಗಟ್ಟಲೆ ಹಣ ಬರುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಗೋಶಾಲೆಗೆ ಪಶು ಸಂಗೋಪನೆ ಇಲಾಖೆಯಿಂದ ೨೦೦೦ನೇ ಇಸವಿಯಲ್ಲಿ ರೂ. ೪೬೦೦೦ ಸಹಾಯಧನ ನೀಡಿದ್ದನ್ನು ಹೊರತು ಪಡಿಸಿದರೆ ಇದುವರೆಗೆ ಯಾವದೇ ಆಹಾರವಾಗಲೀ, ಸಹಾಯವಾಗಲೀ ದೊರೆತಿಲ್ಲ, ದಾನಿಗಳು ಒಂದಿಷ್ಟು ನೆರವು ನೀಡಿದ್ದಾರೆ. ಅದು ಬಿಟ್ಟರೆ ಗೋವುಗಳನ್ನು ರಕ್ಷಿಸುವ ಸಲುವಾಗಿ ಸಾಲ ಮಾಡಲಾಗಿದ್ದು, ಪ್ರಸ್ತುತ ಟ್ರಸ್ಟ್ ರೂ.೨೦ ಲಕ್ಷ ಸಾಲದಲ್ಲಿದೆ. ಶಾಲೆಯ ಲೆಕ್ಕಪತ್ರಗಳನ್ನು ಯಾರೂ ಬೇಕಾದರೂ ಪರಿಶೀಲಿಸಬಹುದೆಂದು ಹೇಳಿದರು.
ಕಾಯಿಲೆಯಿಂದ ಸಾವು
ಗೋಶಾಲೆಯಲ್ಲಿನ ಗೋವುಗಳನ್ನು ಸಾಯಿಸುತ್ತಿರುವುದಾಗಿ ಆರೋಪ ಮಾಡುತ್ತಿದ್ದು, ಇತ್ತೀಚೆಗೆ ಸಾವನ್ನಪ್ಪಿದ ಗೋವುಗಳ ಅಂತ್ಯಕ್ರಿಯೆ ಸಂದರ್ಭ ಅಡ್ಡಿಪಡಿಸಿದ್ದರು. ಗೋವುಗಳ ಸಾವಿಗೆ ಕಾರಣವೇ ಬೇರೆಯೇ ಇದೆ. ೩ ತಿಂಗಳ ಹಿಂದೆ ಬೆಳ್ತಂಗಡಿ, ಉಜಿರೆ ಭಾಗದಿಂದ ೩೫ ಗೋವುಗಳನ್ನು ತಂದು ಬಿಟ್ಟಿದ್ದು, ಆಹಾರ ಹಾಗೂ ಶೆಡ್ ನಿರ್ಮಾಣ ಮಾಡುವುದಾಗಿ ಹೇಳಿ ಹೋದವರು ಇದುವರೆಗೆ ಯಾವದೇ ಸಹಾಯ ಮಾಡಿಲ್ಲ. ಗೋವುಗಳನ್ನು ತಂದು ಬಿಡುವಾಗಲೇ ಎರಡು ಗೋವುಗಳು ಸಾವನ್ನಪ್ಪಿದ್ದವು. ನಂತರದ ದಿನಗಳಲ್ಲಿ ಗೋವುಗಳು ಸಾಯಲು ಪ್ರಾರಂಭ ವಾಗಿದ್ದು, ವೈದ್ಯರು ಪರೀಕ್ಷಿಸಿದಾಗ ಹೆಚ್‌ಎಸ್ ಕಾಯಿಲೆ ಇರುವುದು ಪತ್ತೆಯಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಉಳಿದ ಗೋವುಗಳನ್ನು ಉಳಿಸಿಕೊಳ್ಳು ವದು ಕಷ್ಟವೆಂದು ಹೇಳಿದ್ದಾರೆ. ಆದರೂ ಚಿಕಿತ್ಸೆ, ಔಷಧಿ ನೀಡಿ ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಅನುಕಂಪವಿರಲಿ
ಗೋಶಾಲೆಗೆ ಸಹಾಯ ಮಾಡದಿದ್ದರೂ ಪರವಾಗಿಲ್ಲ. ಆದರೆ ಸುಖಾ ಸುಮ್ಮನೆ ಅಪಪ್ರಚಾರ ಮಾಡಬೇಡಿ. ಇದರಿಂದಾಗಿ ಗೋವುಗಳ ಸಾಕಣೆಗೆ ಕಷ್ಟವಾಗುತ್ತದೆ. ಮುಗ್ಧ ಗೋವುಗಳ ಬಗ್ಗೆ ಅನುಕಂಪ ವಿರಲಿ ಎಂದು ಗೋಶಾಲೆಯ ಟ್ರಸ್ಟಿ ಸುಮಾ ಗೋವಿಂದರಾಜು ಮನವಿ ಮಾಡಿಕೊಂಡರು. ಗೋವುಗಳಿಗೆ ಕಾಯಿಲೆ ಇದ್ದರೆ ಅವುಗಳನ್ನು ಗೋಶಾಲೆಗೆ ಬಿಡಬೇಡಿ, ಕಾಯಿಲೆ ಇತರ ಗೋವುಗಳಿಗೆ ಹರಡಿ ಸಾವನ್ನಪ್ಪುತ್ತವೆ. ಒಂದು ವೇಳೆ ಬಿಡುವುದಾದರೂ ಕಾಯಿಲೆ ಇರುವ ಬಗ್ಗೆ ಮಾಹಿತಿ ನೀಡಿ. ಅದರಿಂದ ಅಂತಹವುಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು.
ಗೋಷ್ಠಿಯಲ್ಲಿ ಟ್ರಸ್ಟಿಗಳಾದ ಮೂಟೇರ ಪುಷ್ಪಾವತಿ ರಮೇಶ್, ಶೋಭಾ ರಾಧಾಕೃಷ್ಣ ಇದ್ದರು.