ಮಡಿಕೇರಿ, ಆ.೨೬ : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ಒಟ್ಟು ರೂ.೨೭೩೬.೩೯ ಲಕ್ಷಗಳ ವಹಿವಾಟು ನಡೆಸುವ ಮೂಲಕ ರೂ.೫೦.೪೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯರಿಗೆ ಶೇ.೧೫ರಂತೆ ಡಿವಿಡೆಂಡ್ ನೀಡಲಾಗುವುದು ಎಂದರು.

ಸಂಘದಲ್ಲಿ ೨೦೨೧-೨೨ನೇ ಸಾಲಿನ ಒಟ್ಟು ‘ಎ' ತರಗತಿಯ ೧೧೧೬ ಸದಸ್ಯರಿದ್ದು, ಸದಸ್ಯರಿಂದ ಪಾಲು ಬಂಡವಾಳವಾಗಿ ರೂ.೧೨೦.೪೨ ಲಕ್ಷಗಳಿರುತ್ತದೆ. ಕ್ಷೇಮ ನಿಧಿ ಸೇರಿ ಇತರೆ ನಿಧಿಗಳು ರೂ.೨೩೬.೨೭ ಲಕ್ಷ ಹಾಗೂ ನಿರಖು ಠೇವಣಿ, ಸಂಚಯ ಠೇವಣಿ ಹಾಗೂ ಇತರೆ ಠೇವಣಿ ಸೇರಿ ಒಟ್ಟು ರೂ.೧೨೯೬.೧೭ ಲಕ್ಷಗಳಿರುತ್ತದೆ. ಸಂಘದ ಬಂಡವಾಳವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಹಾಗೂ ಇತರೆ ಸಹಕಾರ ಸಂಸ್ಥೆಯಲ್ಲಿ ಪಾಲು ಮತ್ತು ನಿರಖು ಠೇವಣಿ ರೂಪದಲ್ಲಿ ಒಟ್ಟು ರೂ.೪೭೦.೪೧ ಲಕ್ಷಗಳನ್ನು ಠೇವಣಿ ಮಾಡಲಾಗಿದೆ ಎಂದು ತಿಳಿಸಿದರು.

ಸದಸ್ಯರ ಅವಶ್ಯಕತೆಗನುಗುಣವಾಗಿ ಕೆ.ಸಿ.ಸಿ ಫಸಲು ಸಾಲ ಸೇರಿ ೨೦೨೧-೨೨ನೇ ಸಾಲಿನಲ್ಲಿ ರೂ.೧೬೨೭.೬೬ ಲಕ್ಷಗಳ ಸಾಲ ವಿತರಿಸಲಾಗಿದೆ ಎಂದರು. ಎಂ.ಸಿ.ಎಫ್ ಮದ್ರಾಸ್ ಫರ್ಟಿಲೈರ‍್ಸ್, ಇಂಡಿಯನ್ ಪೊಟ್ಯಾಷ್ ಇಫ್ಕೊ, ಫ್ಯಾಕ್ಟ್, ಫ್ಯೂಚರ್ ಫರ್ಟಿಲೈರ‍್ಸ್, ಜುವಾರಿ, ಕೋರಮಂಡಲ್ ಸಂಸ್ಥೆಗಳ ಸಗಟು ಲೈಸನ್ಸ್ ಹೊಂದಿದ್ದು, ನೇರವಾಗಿ ರಸಗೊಬ್ಬರ ಖರೀದಿಸಿ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ೨೦೨೧-೨೨ನೇ ಸಾಲಿನಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಹತ್ಯಾರು, ಸಿಮೆಂಟ್ ಹಾಗೂ ಇತರೆ ಅಗತ್ಯ ಸಾಮಗ್ರಿ ಬಾಪ್ತು ರೂ.೫೪೩.೪೯ ಲಕ್ಷಗಳ ವಹಿವಾಟು ಮೂಲಕ ರೂ.೨೮.೪೯ ಲಕ್ಷಗಳ ವ್ಯಾಪಾರ ಲಾಭಗಳಿಸಿದೆ ಎಂದು ತಿಳಿಸಿದರು.

ಸಂಘದ ಮುಖ್ಯ ಕಚೇರಿ ಕೆಳಭಾಗದ ಅಂತಸ್ತಿನ ಮುಂಭಾಗ ಹೊಸದಾಗಿ ಬೋರ್‌ವೆಲ್ ತೆಗೆದು ಸಾರ್ವಜನಿಕರಿಗೆ ಶುದ್ಧನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ರೈತ ಸದಸ್ಯರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರಿಶೀಲನಾ ಯಂತ್ರವನ್ನು ಇಡಲಾಗಿದೆ. ಅಲ್ಲದೆ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆದಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸAಘದ ಮುಖ್ಯ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ಪುಣ್ಯಕೋಟಿ ಅತಿಥಿಗೃಹ ನಿರ್ಮಿಸಿದ್ದು, ಬಾಡಿಗೆಗೆ ನೀಡುತ್ತಿದ್ದೇವೆ. ಆಸಕ್ತರು ವ್ಯಾಪಾರ ಮಳಿಗೆಯನ್ನು ಮುಂಗಡವಾಗಿ ಕಾಯ್ದಿರಿಸಬಹುದು ಎಂದು ಮಣಿಉತ್ತಪ್ಪ ತಿಳಿಸಿದರು. ತಾ.೨೯ ರಂದು ಸಂಘದ ೪೫ನೇ ಮಹಾಸಭೆಯು ಶ್ರೀ ನರೇಂದ್ರಮೋದಿ ಭವನದಲ್ಲಿ ನಡೆಯಲಿದ್ದು, ಸದಸ್ಯರುಗಳು ತಪ್ಪದೆ ಸಭೆಗೆ ಹಾಜರಾಗುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕಣಜಾಲು ಕೆ.ಪೂವಯ್ಯ, ನಿರ್ದೇಶಕರುಗಳಾದ ಮರದಾಳು ಎಸ್.ಉಲ್ಲಾಸ, ಟಿ.ಎಸ್.ಧನಂಜಯ, ಪುತ್ತರಿರ ಪಿ.ನಂಜಪ್ಪ ಹಾಗೂ ನಿರ್ದೇಶಕ ಅಡಿಕೇರ ಈ.ಮುತ್ತಪ್ಪ ಉಪಸ್ಥಿತರಿದ್ದರು.