ಕುಶಾಲನಗರ, ಆ. ೨೬: ನಾಪತ್ತೆಯಾಗಿದ್ದ ಸ್ಥಳೀಯ ವ್ಯಕ್ತಿಯ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾದ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಶಾಲನಗರ ಮಾರ್ಕೆಟ್ ರಸ್ತೆ ಬಳಿ ಆಟೋಮೊಬೈಲ್ ಶಾಪ್ ನಡೆಸುತ್ತಿದ್ದ ಹೇಮ ಪ್ರಸಾದ್ (೩೭) ಎಂಬವರು ನಿಗೂಢವಾಗಿ ಸಾವಿಗೀಡಾಗಿದ್ದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರದ ಬಸವೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ಹೇಮಪ್ರಸಾದ್, ಕೆಲವು ವರ್ಷಗಳಿಂದ ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿ ಸ್ವಂತ ಆಟೋಮೊಬೈಲ್ ಶಾಪ್ ನಡೆಸಿಕೊಂಡು ಬರುತ್ತಿದ್ದು ಕಳೆದ ಕೆಲವು ಸಮಯದಿಂದ ಅನಾರೋಗ್ಯ ಹಿನ್ನೆಲೆ ತಾತ್ಕಾಲಿಕವಾಗಿ ಅಂಗಡಿ ಬಂದ್ ಮಾಡಿದ್ದರು. ತಾ. ೨೧ರಂದು ಸಂಜೆ ಮನೆಯಿಂದ ತೆರಳಿದ ತನ್ನ ಪತಿ ಹಿಂತಿರುಗಿ ಬಂದಿರುವುದಿಲ್ಲ ಎಂದು ಮೃತನ ಪತ್ನಿ ರಚನಾ ಅವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪತಿಯ ಮೊಬೈಲ್ ಮನೆಯಲ್ಲಿ ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು. ಈ ನಡುವೆ ನಾಪತ್ತೆಯಾದ ಹೇಮಪ್ರಸಾದ್ ಅವರನ್ನು ಸ್ನೇಹಿತರ ಮನೆಯಲ್ಲಿ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದಾಗ ಪತ್ತೆಯಾಗದ ಸಂದರ್ಭ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದರು.

ತಾ. ೨೫ರಂದು ಕುಶಾಲನಗರ ಸಮೀಪ ಕಣಿವೆ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಕಾಲು ಕೈಗಳನ್ನು ಹಗ್ಗದಿಂದ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಹಾಕಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದರಿಂದ ಸಾವಿನ ಬಗ್ಗೆ ಸಂಶಯ ವ್ಯಕ್ತಗೊಂಡಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ ಸಂದರ್ಭ ಸಂಶಯ ಬಂದ ಹಿನ್ನೆಲೆಯಲ್ಲಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ನಂತರ ಚೆಟ್ಟಿಮಾನಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಮೃತ ಹೇಮ ಪ್ರಸಾದ್ ಪತ್ನಿ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ. ನಿಗೂಢ ಸಾವಿನ ಬಗ್ಗೆ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬAಧಿಕರು ಹಾಗೂ ಸ್ನೇಹಿತರು ಒತ್ತಾಯಿಸಿದ್ದಾರೆ.